ಕಾರ್ಕಳ,ಆ 5: ತುಳುನಾಡು ಸಂಸ್ಕೃತಿಗಳ ತವರೂರು. ಯಕ್ಷಗಾನ, ದೈವಾರಾಧನೆ,ನಾಗಾರಾಧನೆ ಸಹಿತ ಧಾರ್ಮಿಕ ಆಚರಣೆಗಳನ್ನು ನಶಿಸುತ್ತಿರುವ ನಮ್ಮ ಸಂಸ್ಕೃತಿಯನ್ನು ನೆನಪಿಸುವ ಕಾರ್ಯಕ್ರಮ ಆಟಿಡೊಂಜಿ ಜೋಕ್ಲೆನ ಕೂಟ. ಗ್ರಾಮೀಣ ಭಾಗದಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಿರುವುದು ಶ್ಲಾಘನೀಯ ಎಂದು ಕಾರ್ಕಳ ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಭಾಸ್ಕರ.ಟಿ ಹೇಳಿದರು.
ಅವರು ಎಳ್ಳಾರೆ ಗ್ರಾಮದ ಮುಳ್ಕಾಡು ಸ.ಕಿ ಪ್ರಾ ಶಾಲೆಯಲ್ಲಿ ಮಂಗಳವಾರ ನಡೆದ ಆಟಿಡೊಂಜಿ ಜೋಕ್ಲೆನ ಕೂಟ ಹಾಗೂ ವನಮಹೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ಸ್ವಚ್ಛ ಪರಿಸರವಿದ್ದಲ್ಲಿ ಸ್ವಚ್ಛ ಮನಸ್ಸು ಇರುತ್ತದೆ. ಮಕ್ಕಳಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಲು ಈ ಕಾರ್ಯಕ್ರಮ ಪ್ರೇರಣೆ ನೀಡಿದೆ ಎಂದರು. ಮಕ್ಕಳ ಆರೋಗ್ಯ ವರ್ಧನೆಗೆ ಪೋಷಣ್ ಅಭಿಯಾನದ ಮೂಲಕ ಹಾಲು, ಮೊಟ್ಟೆ, ಬಾಳೆಹಣ್ಣು ನೀಡುವ ಮೂಲಕ ಅಪೌಷ್ಟಿಕತೆ ನಿವಾರಿಸುವ ಕಾರ್ಯಕ್ರಮವಾಗಿದೆ ಸಮುದಾಯದ ಸಹಕಾರದಿಂದ ಸರ್ಕಾರಿ ಶಾಲೆಗಳು ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕಾದ ಅನಿವಾರ್ಯತೆ ಇದೆ ಎಂದರು.
ಉದ್ಯಮಿ ಕಮಲಾಕ್ಷ ಕಾಮತ್ ಕಾರ್ಯಕ್ರಮ ಉದ್ಘಾಟಿಸಿ,ವಿದ್ಯೆ ಇಲ್ಲದವರು ಪಶು ಸಮಾನ,ವಿದ್ಯೆಯಿಂದ ಆತ್ಮವಿಶ್ವಾಸ ಹಾಗೂ ನಾಯಕತ್ವದ ಗುಣಗಳನ್ನು ರೂಪಿಸುತ್ತದೆ. ವಿದ್ಯೆಯ ಜತೆ ವಿನಯಶೀಲರಾಗಬೇಕು ತಂದೆ ತಾಯಿಗಳನ್ನು ಗೌರವಿಸಬೇಕೆಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.
SDMC ಅಧ್ಯಕ್ಷ ಹಾಗೂ ಕಾರ್ಯಕ್ರಮದ ರೂವಾರಿ ಸತೀಶ್ ಪೂಜಾರಿ ಮುಳ್ಕಾಡು ಮಾತನಾಡಿ,ಸನಾತನ ಧರ್ಮದಲ್ಲಿ ಋಷಿ ಪರಂಪರೆ ಹಾಗೂ ಕೃಷಿ ಪರಂಪರೆಗೆ ಅತ್ಯಂತ ವಿಶೇಷ ಮಹತ್ವ ಇದೆ. ಈ ನಿಟ್ಟಿನಲ್ಲಿ ಶಾಲೆಯ 62 ಮಕ್ಕಳು ಹಾಗೂ ಶಿಕ್ಷಕರ ಹೆಸರಿನಲ್ಲಿ 62 ಗಿಡ ನೆಡುವ ಮೂಲಕ ಮಕ್ಕಳಲ್ಲಿ ಪರಿಸರದ ಕುರಿತು ಜಾಗೃತಿ ಮೂಡಿಸುವ ಪ್ರಯತ್ನ ಇದಾಗಿದೆ,ಮಾತ್ರವಲ್ಲದೇ ಮಕ್ಕಳಲ್ಲಿ ಹಿಂದಿನ ಕಾಲದ ಆಟಿ ತಿಂಗಳ ಕಷ್ಟದ ದಿನಗಳನ್ನು ನೆನಪಿಸುವ ಪ್ರಯತ್ನವಾಗಿದೆ ಎಂದರು.
ಈ ಸಂದರ್ಭದಲ್ಲಿ ಕಡ್ತಲ ಗ್ರಾಮ ಪಂಚಾಯತಿ ಅಧ್ಯಕ್ಷ ಸುಕೇಶ್ ಹೆಗ್ಡೆ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ದಿನೇಶ್ ಪೈ ಮುನಿಯಾಲು, ಕವಿತಾ ರಾಮಕೃಷ್ಣ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸದಾಶಿವ ಪ್ರಭು, SDMC ಅಧ್ಯಕ್ಷ ಸತೀಶ್ ಪೂಜಾರಿ ಮುಳ್ಕಾಡು, ಕೌಶಿಕ್, ನಗರಸಭೆ ಸದಸ್ಯ ಸದಾನಂದ ಕುಲಾಲ್ , ಜ್ಯೋತಿ ಹರೀಶ್, ಅರುಣ್ ಹೆಗ್ಡೆ, ಮಾಲತಿ ಕುಲಾಲ್, ವಿಶ್ವನಾಥ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ಮುಖ್ಯೋಪಾಧ್ಯಾಯರಾದ ಜನಾರ್ದನ ಬೆಳಿರಾಯ ಸ್ವಾಗತಿಸಿ,ಶಿಕ್ಷಕ ಸುಭಾಷ್ ಕಾರ್ಯಕ್ರಮ ನಿರೂಪಿಸಿದರು.