ಬೆಂಗಳೂರು,ಸೆ 16 : ಮಾಲೂರು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕರಾದ ಕೆವೈ ನಂಜೇಗೌಡ ಆಯ್ಕೆಯನ್ನು ಅಸಿಂಧುಗೊಳಿಸಿ ಹೈಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ವಿಪಕ್ಷ ನಾಯಕ ಆರ್.ಅಶೋಕ್ ಈ ಕುರಿತು ಪ್ರತಿಕ್ರಿಯಿಸಿದ್ದು, ಕಾಂಗ್ರೆಸ್ ದೇಶದಾದ್ಯಂತ ಮತ ಕಳ್ಳತನ ಅಭಿಯಾನ ನಡೆಸಿತ್ತು, ಆದರೆ ತನ್ನದೇ ಪಕ್ಷದ ಶಾಸಕ ನಂಜೇಗೌಡ ಆಯ್ಕೆ ಅಸಿಂಧು ಪ್ರಕರಣವು ಕಾಂಗ್ರೆಸ್ ಪಕ್ಷದಲ್ಲೇ ಮತ ಕಳ್ಳತನ ನಡೆದಿರುವುದು ಬಯಲಾಗಿದೆ ಎಂದು ಅಶೋಕ್ ಟ್ವಿಟರ್ ನಲ್ಲಿ ಪೋಸ್ಟ್ ಮಾಡಿ ವ್ಯಂಗ್ಯವಾಡಿದ್ದಾರೆ.
ನಂಜೇಗೌಡರ ಅಸಿಂಧು ಆದೇಶಕ್ಕೆ ತಡೆ ನೀಡಿದ ಹೈಕೋರ್ಟ್ ಸುಪ್ರೀಂ ಗೆ ಮೇಲ್ಮನವಿ ಸಲ್ಲಿಸಲು 30 ದಿನಗಳ ಕಾಲಾವಕಾಶ ನೀಡಿದೆ.
ಬೆಂಗಳೂರಿನ ಮಹದೇವಪುರ ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯ ವೇಳೆ ಮತಗಳ್ಳತನ ನಡೆದಿದೆ ಎಂದು ಕಾಂಗ್ರೆಸ್ ನಾಯಕರ ರಾಹುಲ್ ಗಾಂಧಿ ಆರೋಪ ಮಾಡಿದ್ದರು. ಈ ಕುರಿತು ಆರ್ ಅಶೋಕ್ ಎಕ್ಸ್ ನಲ್ಲಿ ಟ್ವೀಟ್ ಮಾಡಿ, ಕಾಂಗ್ರೆಸ್ ಶಾಸಕರ ವೋಟ್ ಚೋರಿ ವಿರುದ್ಧ ಅಭಿಯಾನ ಮಾಡಲು ಈಗ ರಾಹುಲ್ ಗಾಂಧಿ ಅವರು ಮಾಲೂರಿಗೆ ಬರುತ್ತಾರಾ?ಮಹದೇವಪುರದ ಮತದಾರರ ಪಟ್ಟಿಗೆ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಟುಸ್ ಪಟಾಕಿ “ಆಟಂ ಬಾಂಬ್” ಸಿಡಿಸಿದ ರೀತಿ, ಮಾಲೂರು ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷ ನಡೆಸಿರುವ ಅಕ್ರಮದ ಬಗ್ಗೆಯೂ ರಾಹುಲ್ ಗಾಂಧಿ ಅವರು ಸುದ್ದಿ ಗೋಷ್ಠಿ ನಡೆಸಿ “ಬಾಂಬ್” ಸಿಡಿಸುತ್ತಾರಾ?ವೋಟ್ ಚೋರ್ ಕಹಾ ಹೈ? ಕಾಂಗ್ರೆಸ್ ಶಾಸಕಾಂಗ ಪಕ್ಷದಲ್ಲಿ ಹೈ! ಎಂದು ವ್ಯಂಗ್ಯವಾಡಿದ್ದಾರೆ.