ಕಾರ್ಕಳ, ಸೆ.02: ಅಕ್ರಮವಾಗಿ ಕಾಡುಪ್ರಾಣಿ ಬೇಟೆಗೆಂದು ಬಂದಿದ್ದ ಬೇಟೆಗಾರನೊಬ್ಬ ಕಾಡುಪ್ರಾಣಿಗೆ ತನ್ನ ಕೋವಿಯಿಂದ ಗುರಿಯಿಟ್ಟ ಗುಂಡು ಗುರಿತಪ್ಪಿ ಅರ್ಚಕರೊಬ್ಬರ ಮನೆಯ ಬಾಗಿಲಿಗೆ ಹಾಗೂ ಕಾರಿನ ಗ್ಲಾಸ್ ಗೆ ಬಡಿದ ಘಟನೆ ಕಾರ್ಕಳ ತಾಲೂಕಿನ ಕಣಂಜಾರು ಗ್ರಾಮದಲ್ಲಿ ಸಂಭವಿಸಿದೆ.
ಕಣAಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನದ ಅರ್ಚಕ ಗುರುರಾಜ ಮಂಜಿತ್ತಾಯ ಎಂಬವರ ಮನೆಯ ಆವರಣದಲ್ಲಿ ಭಾನುವಾರ ತಡರಾತ್ರಿ ದುಘಟನೆ ಸಂಭವಿಸಿದ್ದು, ಗುರುರಾಜ ಮಂಜಿತ್ತಾಯ ಮತ್ತು ಮನೆಯವರು ರಾತ್ರಿ ನಿದ್ದೆಗೆ ಜಾರಿದ್ದ ವೇಳೆ ತಡರಾತ್ರಿ 12.15ರ ಸುಮಾರಿಗೆ ಮನೆಯ ಹೊರಗಿನಿಂದ ಜೋರಾಗಿ ಗುಂಡು ಬಡಿದ ಶಬ್ದ ಕೇಳಿದ ಹಿನ್ನಲೆಯಲ್ಲಿ ಗುರುರಾಜ ಅವರು ಕೂಡಲೇ ಎದ್ದು ಮನೆಯ ಲೈಟ್ ಆನ್ ಮಾಡಿ ನೋಡಿದಾಗ ಬಾತ್ ರೂಮ್ ಬಳಿ ಇರುವ ಮರದ ಬಾಗಿಲಲ್ಲಿ ತೂತು ಆಗಿದ್ದು, ಪಕ್ದದಲ್ಲೇ ಒಂದು ಗುಂಡು ತಗುಲಿತ್ತು, ಇದಾದ ಬಳಿಕ ಮನೆಯ ಎದುರು ನಿಲ್ಲಿಸಿದ್ದ ಟಾಟ ಪಂಚ್ ಕಾರಿಗೆ ತಗುಲಿದ್ದ ಗುಂಡು ಮರದ ಬಾಗಿಲಿಗೆ ಬಡಿದು ಹಾನಿಯಾಗಿದೆ. ಕಾಡುಪ್ರಾಣಿಗೆಂದು ಇಟ್ಟ ಗುರಿತಪ್ಪಿದ ಗುಂಡು ಮನೆಯ ಬಾಗಿಲು ಹಾಗೂ ಕಾರಿಗೆ ಬಡಿದು ಈ ಘಟನೆ ಸಂಭವಿಸಿದೆ.
ಈ ಘಟನೆಯಿಂದ ಮನೆಮಂದಿ ಬೆಚ್ಚಿ ಬಿದ್ದಿದ್ದು ಘಟನೆಯ ಬಳಿಕ ಬೇಟೆಗಾರ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಕುರಿತು ಹಿರಿಯಡ್ಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.