Share this news

ಬೆಂಗಳೂರು: ಸಿಬಿಎಸ್‌ಇ, ಐಸಿಎಸ್‌ಇ ಹಾಗೂ ಅಂತಾರಾಷ್ಟ್ರೀಯ ಮಂಡಳಿ ಸೇರಿದಂತೆ ಕೇಂದ್ರೀಯ ಪಠ್ಯಕ್ರಮದ ರಾಜ್ಯದ ಎಲ್ಲಾ ಖಾಸಗಿ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಮತ್ತು ದ್ವಿತೀಯ ಭಾಷೆಯಾಗಿ ಬೋಧಿಸುವುದು ಕಡ್ಡಾಯಗೊಳಿಸಿ ನಿಯಮಾವಳಿಗಳಿಗೆ ತಿದ್ದು ಪಡಿ ತಂದು ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ನಿಯಮ ಅನುಸರಿಸಿದರೆ ಮಾತ್ರ ಖಾಸಗಿ ಶಾಲೆಗಳನ್ನು ನಡೆಸಲು ಸರ್ಕಾರದ ನಿರಾಕ್ಷೇಪಣಾ ಪತ್ರ ಸಿಗಲಿದೆ.

ಈ ಹಿಂದೆ ಕೇಂದ್ರೀಯ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿಯೇ ಬೋಧಿಸಬೇಕೆಂಬ ನಿಯಮ ಇತ್ತಾದರೂ, ಇದನ್ನು ತಿದ್ದುಪಡಿ ಮಾಡಿ ದ್ವಿತೀಯ ಅಥವಾ ತೃತೀಯ ಭಾಷೆಯಾಗಿ ಬೋಧಿಸಲು ಕರಡು ನಿಯಮಾವಳಿ ರೂಪಿಸಿ 2022ರ ಮೇ 13ರಂದು ಅಧಿಸೂಚನೆ ಹೊರಡಿಸಲಾಗಿತ್ತು. ಇದಕ್ಕೆ ರಾಜ್ಯದ ಎಲ್ಲಾ ಕನ್ನಡಪರ ಸಂಘಟನೆಗಳು, ಸಾಹಿತಿಗಳು, ಶಿಕ್ಷಣ ತಜ್ಞರು, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಪರಿಷತ್ ಹೀಗೆ ಎಲ್ಲ ಕಡೆಯಿಂದಲೂ ತೀವ್ರ ವಿರೋಧ ವ್ಯಕ್ತವಾಗಿತ್ತು. ಬಳಿಕ ಮತ್ತೆ ಈ ನಿಯಮಾವಳಿಗೆ ತಿದ್ದುಪಡಿ ಮಾಡಿ ಕನ್ನಡವನ್ನು ಪ್ರಥಮ ಹಾಗೂ ದ್ವಿತೀಯ ಭಾಷೆಯನ್ನಾಗಿ ಮಾಡಲು ಕಳೆದ ವರ್ಷದ ಮಾರ್ಚ್‌ನಲ್ಲಿ ಹೊಸ ಕರಡು ನಿಯಮಾವಳಿ ಪ್ರಕಟಿಸಿತ್ತು ಮತ್ತು ಆಕ್ಷೇಪಣೆಗೆ ಅವಕಾಶ ನೀಡಲಾಗಿತ್ತು. ಇದಕ್ಕೆ ಯಾವುದೇ ಆಕ್ಷೇಪಗಳು ಬಾರದ ಹಿನ್ನೆಲೆಯಲ್ಲಿ ಮೊದಲಿನಂತೆಯೇ ಪ್ರಥಮ ಅಥವಾ ದ್ವಿತೀಯ ಭಾಷೆಯಾಗಿ ಕನ್ನಡವನ್ನು ಕಲಿಸಬೇಕೆಂದು ಅಧಿಕೃತ ರಾಜ್ಯಪತ್ರ ಹೊರಡಿಸಲಾಗಿದೆ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಶೈಕ್ಷಣಿಕ ಉದ್ದೇಶಕ್ಕೆ ಭೂಪರಿವರ್ತನೆ ಕಡ್ಡಾಯ:

ಖಾಸಗಿ ಶಾಲೆಗಳನ್ನು ಆರಂಭಿಸಲು ಅಗತ್ಯವಿರುವ ಭೂಮಿಯನ್ನು ‘ಶೈಕ್ಷಣಿಕ ಉದ್ದೇಶಕ್ಕಾಗಿ’ ಎಂದು ಕಂದಾಯ ಇಲಾಖೆಯಿಂದ ಭೂ ಪರಿವರ್ತನೆ ಪಡೆಯುವುದು ಕೂಡ ಕಡ್ಡಾಯಗೊಳಿಸಲಾಗಿದೆ. ಇದುವರೆಗೆ ಕೃಷಿಯೇತರ ಉದ್ದೇಶಕ್ಕೆ ಎಂಬ ಭೂ ಪರಿವರ್ತನೆ ಮಾಡಿದ ಯಾವುದೇ ಭೂಮಿಯಲ್ಲಿ ಶಾಖೆ ಶಾಲೆಗಳನ್ನು ನಡೆಸಲು ಅವಕಾಶವಿತ್ತು.ಇನ್ನುಮುಂದೆ ಶಿಕ್ಷಣ ಉದ್ದೇಶಕ್ಕಾಗಿ ಎನ್ನುವುದನ್ನು ಭೂ ಪರಿವರ್ತನೆಯಲ್ಲಿ ನಮೂದಿಸುವುದು ಕಡ್ಡಾಯವಾಗಿದೆ

 

 

                        

                          

 

 

 

 

 

                        

                          

 

 

 

 

Leave a Reply

Your email address will not be published. Required fields are marked *