ಬೆಂಗಳೂರು : ಕರ್ನಾಟಕದಲ್ಲಿ ತಯಾರಿಸುವ ಉತ್ಪನ್ನಗಳ ಮೇಲೆ ಕನ್ನಡದಲ್ಲಿಯೂ ಹೆಸರು ಬರೆಯುವುದನ್ನು ಕಡ್ಡಾಯಗೊಳಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬೆಂಗಳೂರಿನ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ 69 ನೇ ಕರ್ನಾಟಕ ರಾಜ್ಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಸಿಎಂ, ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಕ್ಷೇತ್ರದಲ್ಲಿ ತಯಾರಿಸುವ ಉತ್ಪನ್ನಗಳ ಮೇಲೆ ಇಂಗ್ಲೀಷ್ ನಲ್ಲಿ ಬರೆಯಲಾಗುತ್ತಿದೆ. ಇನ್ನು ಮುಂದೆ ಕನ್ನಡದಲ್ಲಿಯೂ ಹೆಸರು ಬರೆಯುವುದನ್ನು ಕಡ್ಡಾಯ ಮಾಡಲಾಗುವುದು. ಮಾತೃಭಾಷೆ ಕನ್ನಡವನ್ನು ವ್ಯವಹಾರಿಕವಾಗಿ ಬಳಸುವ ಜೊತೆಗೆ, ಇತರರೊಂದಿಗೆ ಕನ್ನಡದಲ್ಲಿಯೇ ಮಾತನಾಡುವಂತೆ ಶಪಥ ಮಾಡಬೇಕು. ಕನ್ನಡ ಭಾಷೆಗೆ ಎರಡು ಸಾವಿರ ಇತಿಹಾಸವಿದ್ದು, ಬಹಳ ಪ್ರಾಚೀನ ಭಾಷೆಯಾಗಿದೆ. ಆದ್ದರಿಂದ ಕನ್ನಡಕ್ಕೆ ಶಾಸ್ತ್ರೀಯ ಭಾಷೆಯ ಸ್ಥಾನಮಾನ ದೊರೆತಿದೆ. ಭಾಷೆಯನ್ನು ಬಲಿಕೊಟ್ಟು ಉದಾರಿಗಳಾಗಬಾರದು. ಭಾಷೆಯ ಬಗ್ಗೆ ದುರಾಭಿಮಾನ ಬೆಳೆಸಿಕೊಳ್ಳದೇ, ಅಭಿಮಾನಗಳಾಗಬೇಕು. ಭಾಷೆಯನ್ನು ಬೆಳೆಸಿ ಉಳಿಸಲು ಮೊದಲು ಕನ್ನಡಿಗರಾಗಬೇಕು ಎಂದರು.
ರಾಜ್ಯದಲ್ಲಿ ಸುಮಾರು 200ಕ್ಕೂ ಹೆಚ್ಚು ಭಾಷೆಗಳಿವೆ. ಇಲ್ಲಿಯ ಅನ್ನ, ನೀರು, ಗಾಳಿ ಸೇವಿಸಿದ ಮೇಲೆ ಪ್ರತಿಯೊಬ್ಬರೂ ಕನ್ನಡಿಗರಾಗುತ್ತಾರೆ. ಯಾವುದೇ ಭಾಷೆ, ಧರ್ಮ, ಜಾತಿಗೆ ಸೇರಿದವರೇ ಆಗಿರಲಿ ಕರ್ನಾಟಕದಲ್ಲಿರುವ ಎಲ್ಲರೂ ಕನ್ನಡಿಗರು. ಹೀಗಾಗಿ ಕನ್ನಡಿದಲ್ಲಿಯೇ ವ್ಯವಹರಿಸೋಣ, ಇತರರಿಗೂ ಕನ್ನಡ ಕಲಿಸೋಣ. ಬೇರೆ ಭಾಷೆಗಳನ್ನು ಗೌರವಿಸೋಣ ಆದರೆ ನೆಲದ ಭಾಷೆ ಕನ್ನಡವನ್ನು ಪ್ರೀತಿಸೋಣ ಎಂದು ಕರೆ ನೀಡಿದರು.