ಕಾರ್ಕಳ: ಮರದ ಗೆಲ್ಲು ಕಡಿಯಲು ಮರ ಹತ್ತಿದ್ದ ವ್ಯಕ್ತಿಯೊಬ್ಬರು ಆಯತಪ್ಪಿ ಮರದಿಂದ ಬಿದ್ದು ಗಂಭಿರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಕಾರ್ಕಳ ತಾಲೂಕಿನ ಕಾಂತಾವರದ ಕವೈಲ್ ದರ್ಖಾಸ್ ಎಂಬಲ್ಲಿನ ನಿವಾಸಿ ಚಂದ್ರಶೇಖರ(55) ಎಂಬವರು ಮೃತಪಟ್ಟವರು. ಅವರು ಏ.13ರಂದು ತಮ್ಮ ಮನೆ ಸಮೀಪದ ಕಿರಣ್ ಎಂಬವರ ಜಾಗದಲ್ಲಿದ್ದ ಮಾವಿನ ಮರದ ಗೆಲ್ಲು ಕಡಿಯುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಕಾರ್ಕಳದ ಟಿ.ಎಂ.ಎ ಪೈ ಆಸ್ಪತ್ರೆಗೆ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆಗೆ ಸ್ಪಂದಿಸದೇ ಚಂದ್ರಶೇಖರ್ ಸೋಮವಾರ ಮೃತಪಟ್ಟಿದ್ದಾರೆ,ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.