ಕಾರ್ಕಳ: ಕಾರ್ಕಳದ ಜ್ಯೋತಿ ಯುವಕಮಂಡಲದ ಈವರೆಗಿನ ಸಾಧನೆ ಕಾರ್ಕಳದ ಜನತೆ ಮಾತ್ರವಲ್ಲ, ಯಾವುದೇ ಯುವ
ಸಂಘಟನೆಗೆ ಮಾದರಿಯಾಗುವಂತೆ ಚೈತನ್ಯದಾಯಿನಿಯಾಗಿದೆ. ಇಂತಹ ಸಂಘಟನೆ ಮಹಿಳಾ ಮಂಡಲವನ್ನೂ
ಜೊತೆ ಜೊತೆಯಲ್ಲಿ ಸಂಘಟಿಸುತ್ತಾ ಬಂದು, ಲಿಂಗ ಸಮಾನತೆಯ ಸಹೋದರಿಕೆಯ ಸ್ವಸ್ಥ ಮನಸ್ಸಿಗೂ ಸಾಕ್ಷಿಯಾಗಿದೆ. ಜತೆಗೆ ಸಾಹಿತ್ಯಿಕ ಮೌಲ್ಯಗಳನ್ನರಿತು ನನ್ನಂಥ
ಲೇಖಕಿಯನ್ನು ಸನ್ಮಾನಿಸುತ್ತಿರುವುದು ಬಯಸದೇ ಬಂದ ಭಾಗ್ಯವೆನಿಸುತ್ತಿದೆ ಎಂದು
ಕಾರ್ಕಳದ ಖ್ಯಾತ ಸಾಹಿತಿ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತೆ ಜ್ಯೋತಿ ಗುರುಪ್ರಸಾದ್
ಹೇಳಿದ್ದಾರೆ.
ಅವರು ಜ್ಯೋತಿ ಯುವಕ ಮಂಡಲದ 63 ನೇ ವಾರ್ಷಿಕೋತ್ಸವ ಹಾಗೂ ಮಹಿಳಾ ಮಂಡಲದ 20 ನೇ
ವರ್ಷಾಚರಣೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಯುವಜನತೆ ಆಧುನಿಕ
ತಂತ್ರಜ್ಞಾನವನ್ನು ಮಮತೆ, ಕರುಣೆ, ಅಂತಃಕರಣದೊಡನೆ ಬಳಸಲು ಸಮರ್ಥರಾದರೆ ಮಾತ್ರ ತಮಗೂ
ಉಪಕಾರಿಗಳಾಗಿ ಸಮಾಜದ ಹಿತಕ್ಕೂ ಕಾರಣರಾಗುತ್ತಾರೆ. ತಲೆಯೆತ್ತಿ ನಡೆಯುವಂಥ ಪ್ರಾಮಾಣಿಕ
ಹೆಜ್ಜೆಗಳನ್ನಿಟ್ಟು ಪ್ರಾಮಾಣಿಕ ಪರಿಶ್ರಮದಿಂದ ಯುವ ಜನತೆ ದೇಶವು
ಸುಭಿಕ್ಷವಾಗುವುದಕ್ಕೆ ಕಾರಣರಾಗಬೇಕು ಎಂದರು.
ಹಿರಿಯ ನಿವೃತ್ತ ಮುಖ್ಯ ಶಿಕ್ಷಕಿ ಬಿ. ಇಂದಿರಾ ಸನ್ಮಾನ ಸ್ವೀಕರಿಸಿ ಮಾತನಾಡಿ, ಶಿಕ್ಷಕಿಯಾಗಿ ಮುಖ್ಯಶಿಕ್ಷಕಿಯಾಗಿ ನಿವೃತ್ತಳಾಗುವವರೆಗೂ ಜ್ಯೋತಿ ಯುವಕಮಂಡಲ ಮಹಿಳಾ
ಮಂಡಲದ ಸಾಧನೆಗಳನ್ನು ನೋಡುತ್ತ ಕಣ್ತುಂಬಿಕೊಳ್ಳುತ್ತ ಬರುತ್ತಿದ್ದೇನೆ. ಸಾಂಸ್ಕೃತಿಕ
ಚಟುವಟಿಕೆಗಳನ್ನು ನಡೆಸುವ ಕೈಂಕರ್ಯದಲ್ಲಿ ಮುಂಚೂಣಿಯಲ್ಲಿರುವ, ಸ್ಥಳೀಯ ಸಾಧಕರನ್ನು
ಗೌರವಿಸುವ ವಿನಯವನ್ನು ಹೊಂದಿರು ಈ ಸಾರ್ಥಕ ಸಂಘಟನೆಯ ಸಾಧನೆಯನ್ನು ನಮ್ಮ ಸರ್ಕಾರ
ಗುರುತಿಸಿ ಪ್ರಶಸ್ತಿ ನೀಡುವ ಕೆಲಸವಾಗಬೇಕು. ಎಂದರು. ಇದೇ ಸಂದರ್ಭ ಹಿರಿಯ ನಿವೃತ್ತ
ಮುಖ್ಯ ಶಿಕ್ಷಕಿ ಬಿ. ಇಂದಿರಾ ಹಾಗೂ ಸಮಾಜ ಸೇವಕಿ ರಕ್ಷಾ ಶೆಟ್ಟಿ, ಕ್ರೀಡೆಯಲ್ಲಿ
ವಿಶೇಷ ಸಾಧನೆ ಮಾಡಿದ ಶಾನ್ವಿ ಬಲ್ಲಾಳ್, ದೀಪಶ್ರಿ ಮಾಳ, ಮತ್ತು ಕಿಯೊರಾ ಪಾಯಸ್,
ಮಹಿಳಾ ಮಂಡಲ ಮತ್ತು ಯುವಕ ಮಂಡಲದ ಮಾಜಿ ಅಧ್ಯಕ್ಷರುಗಳನ್ನು ಸನ್ಮಾನಿಸಲಾಯಿತು.
ನಿರ್ದೇಶಕ ರವೀಂದ್ರನಾಥ ಹೆಗ್ಡೆ, ಗೌರವಾಧ್ಯಕ್ಷ ವಾಮನ್ ರಾವ್, ಯಶ, ಯುವಕ ಮಂಡಲದ
ಅಧ್ಯಕ್ಷ ಸುಧಾಕರ್ ಕೋಟ್ಯಾನ್, ಮಹಿಳಾ ಮಂಡಲದ ಅಧ್ಯಕ್ಷೆ ದಿವ್ಯಾ ರಾವ್
ಉಪಸ್ಥಿತರಿದ್ದರು
ರಶ್ಮಿ ಕಾರ್ಯಕ್ರಮ ನಿರೂಪಿಸಿದರು, ದಿವ್ಯಾ ಹರೇಂದ್ರ ವರದಿ
ವಾಚಿಸಿದರು, ಗಾಯತ್ರಿ ವಂದಿಸಿದರು.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ