ಮೂಡಬಿದಿರೆ: ಮೂಡಬಿದ್ರೆಯ ಆಳ್ವಾಸ್ ಕಾಲೇಜಿನ ಸಭಾಂಗಣದಲ್ಲಿ ನಾಳೆ ನ.10ರಂದು ಭಾನುವಾರ ನಡೆಯಲಿರುವ ಗದ್ದಿಗೆ ಕರಾವಳಿ ಮರಾಠಿ ಸಮಾವೇಶಕ್ಕೆ ಮರಾಠಿ ಸಮುದಾಯದ ಹಲವು ಸಂಘಟನೆಗಳಿAದ ಬಹಿಷ್ಕಾರದ ಕೂಗು ಕೇಳಿಬಂದಿದೆ. ಈ ಸಮಾವೇಶದ ಉದ್ಘಾಟನೆಗೆ ಆಗಮಿಸಬೇಕಿದ್ದ ಸಿಎಂ ಸಿದ್ಧರಾಮಯ್ಯ ಉಪಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿರುವ ಹಿನ್ನಲೆಯಲ್ಲಿ ನಾಳಿನ ಕಾರ್ಯಕ್ರಮಕ್ಕೆ ಬಹುತೇಕ ಗೈರಾಗುವ ಸಾಧ್ಯತೆ ದಟ್ಟವಾಗಿದೆ.
ಬೆಂಗಳೂರು ಮರಾಠಿ ಸಮಾಜ ಸೇವಾ ಸಂಘ ಹಾಗೂ ದಕ್ಷಿಣ ಕನ್ನಡ ಮರಾಠಿ ಸಮಾಜದ ವತಿಯಿಂದ ಉಡುಪಿ, ದಕ್ಷಿಣ ಕನ್ನಡ ಹಾಗೂ ಕಾಸರಗೋಡು ಜಿಲ್ಲೆಗಳನ್ನು ಒಳಗೊಂಡ ಮರಾಠಿ ಸಮುದಾಯದ ಗದ್ದಿಗೆ ಕರಾವಳಿ ಮರಾಠಿ ಸಮಾವೇಶವನ್ನು ಆಯೋಜಿಸಲಾಗಿತ್ತು. ಆದರೆ ಮರಾಠಿ ಸಮಾವೇಶದ ಆಮಂತ್ರಣ ಪತ್ರಿಕೆಯ ವಿಚಾರದಲ್ಲಿ ಸಾಕಷ್ಟು ಭಿನ್ನಾಭಿಪ್ರಾಯ ವ್ಯಕ್ತವಾಗಿತ್ತು. ಮರಾಠಿ ಸಮುದಾಯದ ಗುರುಪೀಠವಾಗಿರುವ ಶೃಂಗರಿ ಸ್ವಾಮಿಗಳ ಹಾಗೂ ಶಿವಾಜಿ ಮಹಾರಾಜರ ಭಾವಚಿತ್ರವನ್ನು ಮುದ್ರಿಸುವಂತೆ ಒಂದು ಪಂಗಡ ಬಲವಾಗಿ ವಾದಿಸಿತ್ತು. ಇದೇ ವಿಚಾರದಲ್ಲಿ ಸಂಘಟಕರು ಹಾಗೂ ಸಮುದಾಯದ ಕೆಲವು ಸಂಘಟನೆಗಳ ನಾಯಕರ ನಡುವೆ ಪರ ವಿರೋಧ ಚರ್ಚೆ ಕಾರಣವಾಗಿತ್ತು.
ಇದೇ ವಿಚಾರವಾಗಿ ಸಮಾವೇಶದ ಕುರಿತು ಅಪಸ್ವರಗಳು ಹೆಚ್ಚಾಗಿದ್ದು, ಮರಾಠಿ ಸಮುದಾಯದ ಆರಾಧ್ಯ ದೇವರಾದ ಮಹಮ್ಮಾಯಿ ದೇವಿಯ ಭಾವಚಿತ್ರ ಹಾಗೂ ಸಮುದಾಯದ ಆದರ್ಶ ಪುರುಷ ಶಿವಾಜಿ ಮಹಾರಾಜರ ಕಡೆಗಣನೆ ಮರಾಠಿ ಸಮುದಾಯದ ಆಚಾರ ವಿಚಾರ ಸಂಸ್ಕೃತಿ ಸಂಸ್ಕಾರಗಳನ್ನು ಗಾಳಿಗೆ ತೂರಿ ಸರ್ವಾಧಿಕಾರದ ಧೋರಣೆಯಿಂದ ಕಾರ್ಯಕ್ರಮ ಮಾಡುತ್ತಿರುವುದು ನೋವು ತಂದಿದೆ ಎಂದು ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಕೆಲವು ಸಂಘಟನೆಗಳು ಆರೋಪಿಸಿದ್ದು ಮಾತ್ರವಲ್ಲದೇ ಸಮಾವೇಶವನ್ನು ಬಹಿಷ್ಕರಿಸುವುದಾಗಿ ನೀಡಿರುವ ಮಾಧ್ಯಮ ಹೇಳಿಕೆಗಳು ಎಲ್ಲೆಡೆ ವೈರಲ್ ಆಗುತ್ತಿದೆ.