ಕಾರ್ಕಳ: ಅಪರಿಚಿತ ವ್ಯಕ್ತಿಯನ್ನು ನಂಬಿ ಮಹಿಳೆಯೊಬ್ಬರು ಫೇಸ್ಬುಕ್ ಮೂಲಕ ಕಂಟೈನರ್ ಖರೀದಿಸಲು 700 ರೂ ಹಣ ಪಾವತಿಸಿದ ಬಳಿಕ ಆನ್ ಲೈನ್ ವಂಚಕ ಒಂದು ತಿಂಗಳ ಬಳಿಕ 850 ರೂ ಹಣವನ್ನು ಮಹಿಳೆಯ ಖಾತೆಗೆ ಹಾಕಿ ಬಳಿಕ ಆಕೆಯ ಬಳಿ ಹಣ ಹೂಡಿಕೆ ಮಾಡಿದರೆ ದ್ವಿಗುಣಗೊಳಿಸುವುದಾಗಿ ಆಮಿಷವೊಡ್ಡಿ ಬರೋಬ್ಬರಿ 7.50 ಲಕ್ಷ ಲಪಟಾಯಿಸಿದ ಪ್ರಕರಣ ನಡೆದಿದೆ.
ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ಶಾಯಿಸ್ತಾ (26) ಎಂಬಾಕೆ ಹಣ ಕಳೆದುಕೊಂಡ ಮಹಿಳೆ.
ಶಾಯಿಸ್ತಾ ಕಳೆದ ಏಪ್ರಿಲ್ 18 ರಂದು ಕಂಟೈನರ್ ಖರೀಸಿದ ಬಳಿಕ ಜೂ 16 ರಂದು ವಂಚಕ ಶಾಯಿಸ್ತಾ ಅವರಿಗೆ ವಾಟ್ಸಾಪ್ ಗ್ರೂಪ್ ಮೂಲಕ ನೀವು ,5,00,069 ಹಣ ಪಾವತಿಸಿದರೆ ಕೇವಲ 15 ದಿನಗಳಲ್ಲಿ 12,00,069 ಹಣ ಪಾವತಿಸಲಾಗುವುದು ಎಂದು ಆಮಿಷ ಒಡ್ಡಿದ್ದ, ಈತನ ಮಾತನ್ನು ನಂಬಿದ ಮಹಿಳೆ ವಂಚಕನ ಕೋಟಕ್ ಮಹೀಂದ್ರಾ ಖಾತೆಗೆ 5,00,069 ಹಣ ವಾಪತಿಸಿದ್ದರು.ಇದಾದ ಬಳಿಕ ವಂಚಕನ ಸೂಚನೆ ಮೇರೆಗೆ ಆತನ ಖಾತೆಗೆ ಶಾಹಿಸ್ತಾ ತನ್ನ ಗಂಡನ ಐಒಬಿ ಖಾತೆ ಹಾಗೂ ಯೂನಿಯನ್ ಬ್ಯಾಂಕ್ ಖಾತೆಯಿಂದ ಒಟ್ಟು 2.50 ಲಕ್ಷ ಹಣ ವರ್ಗಾಯಿಸಿದ್ದಾರೆ.ಆದರೆ ಬಳಿಕ 15 ದಿನವಾದರೂ ಹಣ ವರ್ಗಾವಣೆ ಮಾಡದೇ ಮೋಸ ಮಾಡಿದ್ದಾನೆ ಎಂದು ಶಾಹಿಸ್ತಾ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಪ್ರಕರಣದಲ್ಲಿ ಈಗಾಗಲೇ ವಂಚಕನ ಬ್ಯಾಂಕ್ ಖಾತೆ ಸ್ಥಗಿತಗೊಳಿಸಲಾಗಿದ್ದು ಈ ಪೈಕಿ 1.50 ಲಕ್ಷ ಹಣವನ್ನು ಮರಳಿ ಪಡೆಯಲಾಗುತ್ತದೆ, ಉಳಿದ ಹಣವನ್ನು ಮರಳಿ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ














