ಕಾರ್ಕಳ: ಕೆಲಸ ಮಾಡುತ್ತಿದ್ದ ವೇಳೆ ಮೈಮೇಲೆ ಮರದ ತುಂಡು ಬಿದ್ದು ಅಸ್ವಸ್ಥಗೊಂಡಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಕಾರ್ಕಳದ ಕೆದಿಂಜೆಯಲ್ಲಿ ನಡೆದಿದೆ.
ಕೆದಿಂಜೆಯ ಗಣೇಶ್ ಅವರು ವಾಸು ಎಂಬವರ ಬಳಿ ಟಿಂಬರ್ ಕೆಲಸ ಮಾಡುತ್ತಿದ್ದು, ಜುಲೈ 19 ರಂದು ಕೌಡೂರಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಮೈಮೇಲೆ ಮರದ ತುಂಡು ಬಿದ್ದು ಕೈ ಊದಿಕೊಂಡಿತ್ತು. ಮರುದಿನ ಮನೆಯಲ್ಲಿಯೇ ಇದ್ದ ಗಣೇಶ್ ಜುಲೈ.21 ರಂದು ವಿಪರೀತ ನೋವು ಇದ್ದ ಕಾರಣ ತನ್ನ ತಾಯಿಯೊಂದಿಗೆ ನಿಟ್ಟೆ ಸಮುದಾಯ ಆರೋಗ್ಯ ಕೆಂದ್ರಕ್ಕೆ ತೆರಳಿ ಚಿಕಿತ್ಸೆ ಪಡೆದಿದ್ದರು. ಆದರೂ ನೋವಿನಿಂದ ನರಳುತ್ತಿದ್ದ ಅವರು ಜುಲೈ.22 ರಂದು ನೋವಿನ ಮಾತ್ರೆ ತೆಗೆದುಕೊಂಡು ಮಲಗಿದ್ದವರು ಮಧ್ಯಾಹ್ನದ ವೇಳೆ ಮಲಗಿದಲ್ಲಿಯೇ ಮೃತಪಟ್ಟಿದ್ದಾರೆ.
ಗಣೇಶ್ ಅವರು ಮರದ ತುಂಡು ಮೈಮೇಲೆ ಬಿದ್ದಿರುವ ಕಾರಣ ಅಥವಾ ಅನಾರೋಗ್ಯದಿಂದ ಮೃತಪಟ್ಟಿರಬಹುದೆಂದು ಶಂಕಿಸಲಾಗಿದ್ದು, ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.