ಕಾರ್ಕಳ: ಇತ್ತೀಚಿನ ದಿನಗಳಲ್ಲಿ ಆನ್’ಲೈನ್ ವಂಚನೆ ನಡೆಯುತ್ತಿದ್ದು ಈ ಬಗ್ಗೆ ಪೊಲೀಸರು ಸಾಕಷ್ಟು ಎಚ್ಚರಿಕೆ ನೀಡುತ್ತಿದ್ದರೂ ಜನ ಮಾತ್ರ ಇನ್ನೂ ಎಚ್ಚೆತ್ತುಕೊಂಡಂತೆ ಕಾಣುತ್ತಿಲ್ಲ. ಯಾಕೆಂದರೆ ಕಾರ್ಕಳದ ಮಹಿಳೆಯೊಬ್ಬರು ಆನ್’ಲೈನ್ ವಂಚನೆ ಜಾಲಕ್ಕೆ ಸಿಲುಕಿ ಬರೋಬ್ಬರಿ 7 ಲಕ್ಷ ರೂ. ಕಳೆದುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.
ಕಾರ್ಕಳದ ಪುಷ್ಪಾ ಎಂಬವರು ವಂಚನೆ ಜಾಲಕ್ಕೆ ಸಿಲುಕಿ ಬಲಿಯಾಗಿ ಹಣ ಕಳೆದುಕೊಂಡ ಮಹಿಳೆ. ಅವರು 2023ರ ಆಗಸ್ಟ್ 26 ರಂದು ಆನ್’ಲೈನ್ ವೆಬ್‌ಸೈಟ್ ಮೂಲಕ HAYSTACK ಎಂಬ ಕಂಪೆನಿಯಲ್ಲಿ ಆನ್‌ಲೈನ್ ಕೆಲಸಕ್ಕೆ ಸೇರಿಕೊಂಡಿದ್ದರು. 2023 ಸೆಪ್ಟೆಂಬರ್ 1 ರಂದು ಕಂಪೆನಿಯವರು ಪುಷ್ಪಾ ಅವರು ಕೆಲಸ ಮಾಡಿದ ಸಂಬಳ 5800 ಡಾಲರ್ ಹಣವನ್ನು ಪುಪ್ಪಾ ಅವರ ಕೊಟಕ್ ಬ್ಯಾಂಕ್ ಖಾತೆಗೆ ಹಾಕಿರುವುದಾಗಿ ಹೇಳಿ ನಿಮ್ಮ ಖಾತೆಗೆ ಹಣ ಜಮೆಯಾಗುತ್ತಿಲ್ಲ ಎಂದು ನಂಬಿಸಿ ಅದರ ಸ್ಕ್ರೀನ್ ಶಾಟ್ ಕಳುಹಿಸಿದ್ದರು.
ಬಳಿಕ ಹಣವನ್ನು ಡ್ರಾ ಮಾಡಿಕೊಳ್ಳಲು ಪುಷ್ಪಾ ಅವರಿಗೆ ವಂಚಕರೇ ಕೊಟಕ್ ಬ್ಯಾಂಕ್ ಖಾತೆ ಮಾಡಿಕೊಟ್ಟು ಅಕೌಂಟ್‌ಗೆ 2,50,000 ರೂ. ಹಣವನ್ನು ಜಮೆ ಮಾಡಿದ್ದಾರೆ. ಆದರೆ ಆ ಹಣವನ್ನು ಡ್ರಾ ಮಾಡಿಕೊಳ್ಳಲು ಕಂಪನಿಯ ರಿಮೋಟ್ ಪರ್ಮಿಟ್ ಪಡೆದುಕೊಳ್ಳಬೇಕು, ರಿಮೋಟ್ ಪರ್ಮಿಟ್‌ಗೆ ಹಣ ನೀಡಬೇಕು ಎಂದು ನಂಬಿಸಿ ಪುಷ್ಪಾ ಅವರಿಂದ ಸೆ.1ರಿಂದ ಸೆ.22ರ ವರೆಗೆ ಕಂಪನಿಯ ಬೇರೆ ಬೇರೆ ಅಕೌಂಟ್‌ಗೆ ಹಂತಹಂತವಾಗಿ ಒಟ್ಟು 7 ಲಕ್ಷ ರೂ. ಗಳನ್ನು ಹಾಕಿಸಿಕೊಂಡಿದ್ದಾರೆ. ಆನಂತರ ಸಂಬಳವನ್ನೂ ನೀಡದೇ ಪರ್ಮಿಟ್‌ಗಾಗಿ ಹಾಕಿದ ಹಣವನ್ನೂ ನೀಡದೇ ವಂಚನೆ ಎಸಗಿದ್ದಾರೆ ಎಂದು ಪುಷ್ಟಾ ಕಾರ್ಕಳ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.