Share this news

ಕಾರ್ಕಳ : ಮಳೆಯಾಶ್ರಿತ ಕೃಷಿಯನ್ನು ಸುಸ್ಥಿರ ಕೃಷಿಯನ್ನಾಗಿ ರೂಪಾಂತರಗೊಳಿಸುವ ನಿಟ್ಟಿನಲ್ಲಿ, ಸಮರ್ಪಕ ಮಳೆ ನೀರಿನ ಸಂಗ್ರಹಣೆ ಹಾಗೂ ಉಪಯುಕ್ತ ಬಳಕೆ ಪದ್ಧತಿಯಿಂದ ಕೃಷಿ ಉತ್ಪಾದಕತೆಯನ್ನು ಉತ್ತಮ ಪಡಿಸಿ ಆದಾಯವನ್ನು ಹೆಚ್ಚಿಸುವ ಸಲುವಾಗಿ ಮತ್ತು ಮಳೆ ನೀರನ್ನು ವ್ಯರ್ಥ ಮಾಡದೇ ಆಯ್ದ ಸ್ಥಳದಲ್ಲಿ ಕೃಷಿ ಹೊಂಡ ತೆಗೆದು ಜಲ ಸಂಗ್ರಹಿಸಿ, ಬೆಳೆಗಳ ಸಂದಿಗ್ಧ ಹಂತಗಳಲ್ಲಿ ರಕ್ಷಣಾತ್ಮಕ ನೀರಾವರಿ ಒದಗಿಸುವ ಸಲುವಾಗಿ ಕೃಷಿ ಭಾಗ್ಯ ಯೋಜನೆಯನ್ನು ಕಾರ್ಕಳ ಹಾಗೂ ಹೆಬ್ರಿ ತಾಲ್ಲೂಕಿನಲ್ಲಿ ಅನುಷ್ಟಾನಗೊಳಿಸಲಾಗುತ್ತಿದೆ.

ಈ ಯೋಜನೆಯಡಿ ಕ್ಷೇತ್ರ ಬದು ನಿರ್ಮಾಣ, ನೀರು ಸಂಗ್ರಹಣಾ ರಚನೆ (ಕೃಷಿ ಹೊಂಡ), ನೀರು ಇಂಗದಂತೆ ತಡೆಯಲು ಪಾಲಿಥೀನ್ ಹೊದಿಕೆ, ಕೃಷಿ ಹೊಂಡದ ಸುತ್ತಲೂ ತಂತಿ ಬೇಲಿ, ಹೊಂಡದಿಂದ ನೀರು ಎತ್ತಲು ಡೀಸೆಲ್/ಪೆಟ್ರೋಲ್/ಸೋಲಾರ್ ಪಂಪ್ ಸೆಟ್, ನೀರನ್ನು ಬೆಳೆಗೆ ಹಾಯಿಸಲು ಸೂಕ್ಷ್ಮ (ತುಂತುರು/ಹನಿ) ನೀರಾವರಿ ಘಟಕಗಳನ್ನು ನಿರ್ಮಿಸಕೊಳ್ಳಲು ಅವಕಾಶವಿದೆ.
ಕೃಷಿ ಭಾಗ್ಯ ಪ್ಯಾಕೇಜಿನಲ್ಲಿ ಒಟ್ಟು 6  ಘಟಕಗಳನ್ನು ಒಳಗೊಂಡಿದ್ದು ಎಲ್ಲಾ ಘಟಕಗಳನ್ನು ಫಲಾನುಭವಿ ರೈತರು ಯೋಜನೆಯ ಸಮಗ್ರ ಸದುಪಯೋಗ ಪಡೆದುಕೊಳ್ಳಬಹುದು.

ಈ ಯೋಜನೆಯಡಿ ಸಾಮಾನ್ಯ ವರ್ಗದ ರೈತರಿಗೆ ಶೇ.80ರಷ್ಟು ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ರೈತರಿಗೆ ಶೇ90ರಷ್ಟು ಸಹಾಯಧನ ನೀಡಲು ಅವಕಾಶವಿದೆ. ಆಸಕ್ತಿಯುಳ್ಳ ರೈತರು ತಮಗೆ ಸಂಬಂದಿಸಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಅರ್ಜಿಯನ್ನು ಪಡೆದು ಭರ್ತಿ ಮಾಡಿದ ಅರ್ಜಿಯೊಂದಿಗೆ ಪಾಸ್ ಪೋರ್ಟ್ ಅಳತೆಯ ಫೋಟೊ,ಪಹಣಿ, ಜಾತಿ ಪ್ರಮಾಣ ಪತ್ರ,ಬ್ಯಾಂಕ್ ಪುಸ್ತಕದ ಪ್ರತಿ ಸೇರಿದಂತೆ ಅಗತ್ಯ ದಾಖಲೆಗಳನ್ನು ಲಗತಿಸಿ ನಿಮ್ಮ ಹತ್ತಿರದ ರೈತ ಸಂಪರ್ಕ ಕೇಂದ್ರಕ್ಕೆ ಸಲ್ಲಿಸಲು ಕೋರಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ರೈತ ಸಂಪರ್ಕ ಕೇಂದ್ರವನ್ನು ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

                        

                          

                        

                          

 

`

Leave a Reply

Your email address will not be published. Required fields are marked *