ಕಾರ್ಕಳ:ಸಮಾಜದ ದುರ್ಬಲ ವರ್ಗ ಹಾಗೂ ಕಷ್ಟದಲ್ಲಿರುವ ಜನರ ಬದುಕಿಗೆ ಸ್ಪಂದಿಸಿ ಆಸರೆಯಾಗಿ,ಅವರ ಕಣ್ಣೀರು ಒರೆಸುವ ಕೆಲಸ ಮಾಡಿದ್ದಲ್ಲಿ ಅದರಲ್ಲಿ ಜೀವನದ ಸಾರ್ಥಕ್ಯ ಇದೆ. ಉಳ್ಳವರು ಇಲ್ಲದವರಿಗೆ ಕೊಟ್ಟು ಅವರ ಕೈ ಹಿಡಿದು ಮುನ್ನಡೆಯಲು ಸಂಘ ಸಂಸ್ಥೆಗಳು ಮತ್ತು ದಾನಿಗಳು ಶ್ರಮಿಸಬೇಕು. ಸಾಧನೆ ಮಾಡಲು ಬಹಳಷ್ಟು ಆವಕಾಶಗಳು ಇವೆ.ಕಠಿಣ ಪರಿಶ್ರಮ ಮತ್ತು ಸಾಧಿಸುವ ಛಲ ನಮ್ಮಲ್ಲಿ ಇರಬೇಕು.ಆದುದರಿಂದ ಪ್ರತಿಯೊಬ್ಬರೂ ಅವಕಾಶಗಳನ್ನು ಸದುಪಯೋಗ ಪಡಿಸಿಕೊಂಡು ಉನ್ನತ ಸ್ಥಾನಕ್ಕೆ ಏರಲು ಪ್ರಯತ್ನಿಸಬೇಕು ಎಂದು ಅಂತರಾಷ್ಟ್ರೀಯ ಈಜು ತರಬೇತುದಾರ ಬಿ ಕೆ ನಾಯ್ಕ್ ಹೇಳಿದರು.
ಅವರು ಕಾರ್ಕಳ ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘ ವತಿಯಿಂದ ಫೆ.23 ರಂದು ಭಾನುವಾರ ಕಾರ್ಕಳ ಸ್ವರಾಜ್ ಮೈದಾನದಲ್ಲಿ ನಡೆದ ಛತ್ರಪತಿ ಶಿವಾಜಿ ಜಯಂತಿ ಹಾಗೂ ಮರಾಠಿ ಕ್ರೀಡಾ ಸಂಭ್ರಮ 2025 ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಸಂಘದ ಅಧ್ಯಕ್ಷರಾದ ಶೇಖರ ಕಡ್ತಲ ಅಧ್ಯಕ್ಷತೆ ವಹಿಸಿ ಶಿವಾಜಿ ಮಹಾರಾಜರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಸಂಘದ ಧ್ಯೇಯ ವಾಕ್ಯ ಸಂಘಟನೆ, ಸೇವೆ ಮತ್ತು ಸಂಸ್ಕೃತಿ ಇದರಂತೆ ನಾವು ತೊಡಗಿಸಿಕೊಳ್ಳಬೇಕು. ತಪ್ಪಿಸಿಕೊಳ್ಳಬಾರದು. ಮುಂದೆ ಹೋಗುವರ ಕಾಲನ್ನು ಎಳೆಯದೇ ಬೆನ್ನುತಟ್ಟಿ ಪ್ರೋತ್ಸಾಹಿಸಬೇಕು. ಎಲ್ಲರ ಪಾಲ್ಗೊಳ್ಳುವಿಕೆಯಿಂದ ಬಲಿಷ್ಠ ಸಮಾಜ ನಿರ್ಮಾಣ ಆಗಬೇಕೆಂದು ತಿಳಿಸಿದರು.
ಕರ್ನಾಟಕ ಬ್ಯಾಂಕಿನ ಪ್ರವೀಣ್ ನಾಯ್ಕ್ ಸಂಪಿಗೆ ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ದ.ಕ.ಜಿಲ್ಲಾ ಮಾಜಿ ಅಧ್ಯಕ್ಷ ಶ್ರೀನಿವಾಸ ನಾಯ್ಕ್ ಧ್ವಜಾರೋಹಣ ಗೈದರು.ವೇದಿಕೆಯಲ್ಲಿ ಮಾಧವ ನಾಯ್ಕ್ ದುರ್ಗ, ರಾಮಚಂದ್ರ ನಾಯ್ಕ್ ಅರ್ಬಿ, ಕಂಟ್ರಾಕ್ಟರ್ ರವಿರಾಜ್ ನಾಯ್ಕ್, ಶಿಲ್ಪಿ ವಸಂತ್ ನಾಯ್ಕ್, ಬ್ಯಾಂಕ್ ಉದ್ಯೋಗಿ ವೆಂಕಟೇಶ್ ನಾಯ್ಕ್, ಪುತ್ತಿಗೆ ಸಂಘದ ಅಧ್ಯಕ್ಷ ವಿಠ್ಠಲ ನಾಯ್ಕ್, ಕಸ್ತೂರಿ ಶೇಖರ ನಾಯ್ಕ್ ಮುದ್ರಾಡಿ,ನಾಗೇಂದ್ರ ನಾಯ್ಕ್ ಹೆಬ್ರಿ, ಸುಗಂಧಿ ಶ್ರೀನಿವಾಸ ನಾಯ್ಕ್, ಮಹಿಳಾ ಘಟಕ ಅಧ್ಯಕ್ಷೆ ಶಶಿಕಲಾ ಹಿರ್ಗಾನ, ಉಮೇಶ್ ನಾಯ್ಕ್ ಸೂಡ, ಶಂಕರ ನಾಯ್ಕ್ ದುರ್ಗ, ಶ್ರೀನಿವಾಸ ನಾಯ್ಕ್ ನಕ್ರೆ, ಅಶೋಕ್ ನಾಯ್ಕ್ ದುರ್ಗ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಇತ್ತೀಚೆಗೆ ನಿಧನರಾದ ಪ್ರವೀಣ್ ನಾಯ್ಕ್ ಕುಕ್ಕುಜೆ ಇವರ ಕುಟುಂಬಕ್ಕೆ ಆರ್ಥಿಕ ನೆರವು ಹಸ್ತಾಂತರಿಸಲಾಯಿತು.
ಪದ್ಮಾಕರ ನಾಯ್ಕ್ ಮಿಯಾರು ಕಾರ್ಯಕ್ರಮ ನಿರೂಪಿಸಿದರು. ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿ ಪವನ್ ದುರ್ಗ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಹರೀಶ್ ಇರ್ವತ್ತೂರು ಧನ್ಯವಾದ ಸಲ್ಲಿಸಿದರು.
ಅನಂತರ ಸಾವಿರಾರು ಸಮಾಜ ಬಂಧುಗಳ ಸಮ್ಮುಖದಲ್ಲಿ ಉಡುಪಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟ,ತ್ರೋಬಾಲ್ ಹಾಗೂ ಕಾರ್ಕಳ ಹೆಬ್ರಿ ತಾಲೂಕು ಮಟ್ಟದ ವಾಲಿಬಾಲ್,ಹಗ್ಗ ಜಗ್ಗಾಟ ಹಾಗೂ ಹಾಗೂ ವಾರ್ಷಿಕ ಅಥ್ಲೆಟಿಕ್ಸ್ ಸ್ಪರ್ಧೆ ನಡೆಯಿತು. ಸಂಜೆ ಗಣ್ಯರ ಸಮ್ಮುಖದಲ್ಲಿ ವಿಜೇತರಿಗೆ ಬಹುಮಾನ ನೀಡಿ ಗೌರವಿಸಲಾಯಿತು.

