ಕಾರ್ಕಳ: ಪತಿಯನ್ನು ಕಳೆದುಕೊಂಡ ಮಹಿಳೆಯನ್ನು ಮದುವೆಯಾಗುವುದಾಗಿ ನಂಬಿಸಿ ಒಂದು ವರ್ಷದಿಂದ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದು ಗರ್ಭಿಣಿಯಾದ ಮಹಿಳೆಯನ್ನು ಮದುವೆಯಾಗಲು ನಿರಾಕರಿಸಿ ಆಕೆಯ ಮೇಲೆ ಹಲ್ಲೆ ನಡೆಸಿರುವ ಘಟನೆ ಕಾರ್ಕಳ ತಾಲೂಕಿನ ಸೂಡಾ ಗ್ರಾಮದ ಜಂತ್ರದಲ್ಲಿ ನಡೆದಿದೆ.
ಶಿವಮೊಗ್ಗ ಜಿಲ್ಲೆಯ ಮಾರ್ಗರೇಟ್ (48ವ) ಅವರು ಗಂಡ ಮೃತಪಟ್ಟ ನಂತರ 2023 ರಲ್ಲಿ ವಧು-ವರರ ಅನ್ವೇಷಣೆ ಜೋಡಿ ಆಪ್ ನಲ್ಲಿ ಹೆಸರು ನೊಂದಾಯಿಸಿದ್ದರು. ಅದರಲ್ಲಿ ಪ್ರೊಫೈಲ್ ನೋಡಿ 21/11/2023 ರಂದು ಮೊಬೈಲ್ ನಂಬ್ರ 7899901153 ರಿಂದ ಆರೋಪಿ ಕಾರ್ಕಳ ತಾಲೂಕಿನ ಸೂಡಾ ಗ್ರಾಮದ ಜಂತ್ರ ಆಶ್ರಯ ಕಾಲನಿ ನಿವಾಸಿ ರೋನಾಲ್ಡ್ ಫೆರ್ನಾಂಡಿಸ್ ಎಂಬಾತ ಕರೆ ಮಾಡಿ ಪರಿಚಯಿಸಿಕೊಂಡು ಉಡುಪಿಗೆ ಬರಲು ತಿಳಿಸಿ ಅಲ್ಲಿಂದ 22/11/2023 ರಂದು ಆತನ ಮನೆಗೆ ಕರೆದುಕೊಂಡು ಹೋಗಿದ್ದ.
ನಂತರ ಮದುವೆ ಬಗ್ಗೆ ಮಾತನಾಡಲು ಮನೆಯವರು ಬರುತ್ತಾರೆಂದು ತಿಳಿಸಿ ನಂಬಿಸಿ ಮನೆಯಲ್ಲಿಯೇ ನಿಲ್ಲಿಸಿ ಮರುದಿನ ಊರಿಗೆ ಹೋಗುವಂತೆ ತಿಳಿಸಿ ಮಾರ್ಗರೇಟ್ ರನ್ನು ಬೆಳ್ಮಣ್ ಬಸ್ ಸ್ಟಾಂಡ್ ಗೆ ಬಿಟ್ಟಿದ್ದ.
ಆ ಬಳಿಕ 24/11/2023 ರಂದು ಶಿವಮೊಗ್ಗಕ್ಕೆ ಹೋಗಿ ಮಾರ್ಗರೇಟ್ ಅವರನ್ನು ಮದುವೆಯಾಗುವುದಾಗಿ ನಂಬಿಸಿ ಜಂತ್ರದ ತನ್ನ ಮನೆಗೆ ಕರೆದುಕೊಂಡು ಬಂದು ಒಂದು ವರ್ಷಗಳ ಕಾಲ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದು ಈ ವೇಳೆ ಮಹಿಳೆ ಗರ್ಭವತಿಯಾಗಿದ್ದಾರೆ.
ತನ್ನನ್ನು ಮದುವೆಯಾಗುವಂತೆ ರೋನಾಲ್ಡ್ ಫೆರ್ನಾಂಡಿಸ್ ಗೆ ಒತ್ತಾಯ ಮಾಡಿದಾಗ ಮದುವೆಯಾಗುವುದಿಲ್ಲ ಎಂದು ಗಲಾಟೆ ಮಾಡಿ ಕತ್ತಿಯಿಂದ ಹಲ್ಲೆ ನಡೆಸಲು ಯತ್ನಿಸಿ, ಹೊಟ್ಟೆಗೆ ಹಲ್ಲೆ ನಡೆಸಿ ಕೋಣೆಯಲ್ಲಿ ಕೂಡಿ ಹಾಕಿದ್ದ. ಹೊಟ್ಟೆಗೆ ಹಲ್ಲೆ ನಡೆಸಿದ ಪರಿಣಾಮ ಮಹಿಳೆಗೆ ಗರ್ಭಪಾತವಾಗಿದ್ದು, ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.