ಕಾರ್ಕಳ: ಅಂಗನವಾಡಿ ಕಟ್ಟಡ ಉದ್ಘಾಟನೆಯ ವಿಚಾರದಲ್ಲಿ ಪ್ರೊಟೊಕಾಲ್ ಪಾಲಿಸದ ಅಂಗನವಾಡಿ ಕಾರ್ಯಕರ್ತೆಯನ್ನು ಅಮಾನತುಗೊಳಿಸಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕರು ಆದೇಶಿಸಿದ್ದಾರೆ.
ಕುಕ್ಕುಂದೂರು ಗ್ರಾಮದ ಜಯಂತಿನಗರ ಅಂಗನವಾಡಿ ಕೇಂದ್ರದ ಕಾರ್ಯಕರ್ತೆ ಪ್ರಭಾವತಿ ಎಂಬವರು ಅಮಾನತುಗೊಂಡವರು.
ಕುಕ್ಕುಂದೂರು ಗ್ರಾಮ ಪಂಚಾಯತ್ ಅನುದಾನದಿಂದ ನಿರ್ಮಿಸಲಾಗಿರುವ ಅಂಗನವಾಡಿಯ ಹೆಚ್ಚುವರಿ ಕೊಠಡಿಯ ಉದ್ಘಾಟನೆ ಆ.28 ರಂದು ನಡೆದಿತ್ತು. ಗಣಹೋಮ ಹಾಗೂ ಹೆಚ್ಚುವರಿ ಕೊಠಡಿ ಉದ್ಘಾಟನೆ ಮಾಹಿತಿಯನ್ನು ಸ್ಥಳೀಯ ಶಾಸಕ ಸುನಿಲ್ ಕುಮಾರ್ ಅವರ ಗಮನಕ್ಕೆ ತಂದಿರಲಿಲ್ಲ.ಶಾಸಕರನ್ನು ಕಡೆಗಣಿಸಿ ಈ ಕಾರ್ಯಕ್ರಮ ನಡೆದಿರುವ ಬಗ್ಗೆ ಸ್ಥಳೀಯರು ಇಲಾಖೆಗೆ ದೂರು ನೀಡಿದ್ದರು.ಇದಕ್ಕೆ ಸಂಬಂಧಿಸಿ ಜಯಂತಿನಗರ ಅಂಗನವಾಡಿ ಕಾರ್ಯಕರ್ತೆ ಹಾಗೂ ಸಂಬಂಧಪಟ್ಟ ವಲಯ ಮೇಲ್ವಿಚಾರಕಿಗೆ ಕಾರಣ ಕೇಳಿ ಇಲಾಖೆಯಿಂದ ನೋಟೀಸು ನೀಡಲಾಗಿತ್ತು. ಅದರೆ ಈ ಕುರಿತು
ಅಂಗನವಾಡಿ ಕಾರ್ಯಕರ್ತೆ ಮತ್ತು ವಲಯ ಮೇಲ್ವಿಚಾರಕಿ ನೋಟಿಸಿಗೆ ಸಮಜಾಯಿಷಿ ನೀಡಿದ್ದರು.
ಈ ಕುರಿತು ತನಿಖೆ ನಡೆಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಇದು ಶಿಷ್ಟಾಚಾರ ಉಲ್ಲಂಘನೆಯಾಗಿದ್ದು, ಜಿಲ್ಲಾಧಿಕಾರಿ ಸೂಚನೆ ಮೇರೆಗೆ ಕರ್ತವ್ಯಲೋಪ ಎಸಗಿದ ಅಂಗನವಾಡಿ ಕಾರ್ಯಕರ್ತೆ ಪ್ರಭಾವತಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.