ಕಾರ್ಕಳ: ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡಬೇಕೆಂದು ನಿಟ್ಟಿನಲ್ಲಿ ಕಳೆದ ನಾಲ್ಕು ದಶಕಗಳ ಹಿಂದೆ ಕಾರ್ಕಳ ಕುಕ್ಕುಂದೂರಿನ ಜಯಂತಿ ನಗರದಲ್ಲಿ ಸಣ್ಣ ಕಟ್ಟಡದಲ್ಲಿ ಆರಂಭವಾದ ಕೆಎಂಇಎಸ್ ಶಿಕ್ಷಣ ಸಂಸ್ಥೆಯು ಇದೀಗ ನವೀಕೃತ ಕೊಠಡಿಗಳು ಹಾಗೂ ನೂತನ ಆಡಿಟೋರಿಯಂ ಲೋಕಾರ್ಪಣೆ ಸಜ್ಜಾಗಿದೆ.
1984ರಲ್ಲಿ ಸ್ಥಾಪನೆಗೊಂಡ ಈ ಶಿಕ್ಷಣ ಸಂಸ್ಥೆಯು ಕೆ ಎಸ್ ಮಹಮ್ಮದ್ ಮಸೂದ್ ಅವರ ನಿಸ್ವಾರ್ಥ ಸೇವೆಯಿಂದ ಇಂದು ಈ ಮಟ್ಟಕ್ಕೆ ಬೆಳೆದು ನಿಂತಿದೆ. 1984ರಲ್ಲಿ ಈ ಸಂಸ್ಥೆಯು ಆರಂಭಗೊAಡಾಗ ಸ್ವಂತ ಕಟ್ಟಡ ಹೊಂದಿರಲಿಲ್ಲ. ಸರಕಾರಿ ಉರ್ದು ಶಾಲೆಯಲ್ಲಿ ಎಲ್ ಕೆ ಜಿ ತರಗತಿ ಆರಂಭಿಸಿ 22 ವಿದ್ಯಾರ್ಥಿಗಳು ಹಾಗೂ ಇಬ್ಬರು ಶಿಕ್ಷಕರಿದ್ದು ತರಗತಿಗಳನ್ನು ನಡೆಸಿದ್ದರು. ಆಗ ಕೆ ಎಸ್ ರಶೀದ್ ಹೈದರ್ ಸಂಚಾಲಕರಾಗಿ ಪಿ.ಎಂ ಖಾನ್ ಅಧ್ಯಕ್ಷರಾಗಿ ಹಾಗೂ ಕೆ ಎಸ್ ನಝೀರ್ ಅಹ್ಮದ್ ಕೋಶಾಧಿಕಾರಿಯಾಗಿ ಕೆಎಂಎಸ್ ನ ಆಡಳಿತ ಮಂಡಳಿಯನ್ನು ಮುನ್ನಡೆಸಿದ್ದರು.
ನಂತರದ ದಿನಗಳಲ್ಲಿ ಈ ಸಂಸ್ಥೆಯು ಕೆ ಎಸ್ ನಝೀರ್ ಅಹಮದ್ ಮಾಲಕತ್ವದ ಹಳೆಯ ಕೆಇಬಿ ಕಟ್ಟಡಕ್ಕೆ ಸ್ಥಳಾಂತರಗೊAಡಿತು. ಆ ಬಳಿಕ ವಿದ್ಯಾರ್ಥಿಗಳ ಸಂಖ್ಯೆಯಲ್ಲಿಯೂ ಹೆಚ್ಚಳವಾಯಿತು. ಬಳಿಕ 1993ರಲ್ಲಿ ಸ್ವಂತ ಸ್ಥಳವನ್ನು ಖರೀದಿಸಿ ಎಲ್ ಕೆ ಜಿ ಯಿಂದ 5ನೇ ತರಗತಿವರೆಗೆ ಶಿಕ್ಷಣ ಸಂಸ್ಥೆಯನ್ನು ಮುನ್ನಡೆಸಲಾಯಿತು. 1996ರಲ್ಲಿ ಆಗಿನ ಅಧ್ಯಕ್ಷರಾಗಿದ್ದ ಪಿ.ಎಂ ಖಾನ್ ಸಾಹೇಬ್ ನಿಧನರಾದ ಬಳಿಕ ಕೆ ಎಸ್ ಇಮ್ತಿಯಾಝ್ ಅಹಮದ್ ಆಡಳಿತದ ಚುಕ್ಕಾಣಿಯನ್ನು ಹಿಡಿದು ಸಂಸ್ಥೆಯನ್ನು ಮುನ್ನಡೆಸಿದರು.
ಅವರ ಅಧ್ಯಕ್ಷತೆಯಲ್ಲಿ ಸಂಸ್ಥೆಯು ಅಭಿವೃದ್ಧಿಯತ್ತ ದಾಪುಗಾಲು ಹಾಕಲು ಆರಂಭಿಸಿತು . ಈ ನಡುವೆ ಕೆ ಎಸ್ ನಿಸಾರ್ ಅಹಮದ್ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಮೂರು ತರಗತಿಗಳನ್ನು ನಿರ್ಮಿಸಿದರು. ವಿದ್ಯಾರ್ಥಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಲು ಪ್ರಾರಂಭವಾಯಿತು. ಈ ಹಿನ್ನೆಲೆಯಲ್ಲಿ 1997ರಲ್ಲಿ ಪ್ರೌಢಶಾಲೆಯ ನೂತನ ಕಟ್ಟಡ ನಿರ್ಮಾಣವಾಯಿತು.2001 ರಲ್ಲಿ ಪದವಿ ಪೂರ್ವ ಕಾಲೇಜಿನ ಕನಸು ನನಸಾಯಿತು . ಹೀಗೆ ಕೆಎಂಎಸ್ ಶಿಕ್ಷಣ ಸಂಸ್ಥೆಯು ಒಂದು ಮಾದರಿ ಶಿಕ್ಷಣ ಸಂಸ್ಥೆಯಾಗಿ ಬಡ ಹಾಗೂ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣವನ್ನು ನೀಡುತ್ತಾ ಬಂದಿದೆ .
ಇದೀಗ ಕೆಎಂಇಎಸ್ ಶಿಕ್ಷಣ ಸಂಸ್ಥೆಯ ನವೀಕೃತ ಕೊಠಡಿಗಳು ಹಾಗೂ ನೂತನ ಆಡಿಟೋರಿಯಂ ಲೋಕಾರ್ಪಣೆಗೆ ಸಿದ್ದಗೊಂಡಿದ್ದು, ಇದರ ಉದ್ಘಾಟನಾ ಸಮಾರಂಭವು ಮಾರ್ಚ್ 11ರಂದು ಬೆಳಿಗ್ಗೆ 10:30 ಕ್ಕೆ ಜರುಗಲಿದೆ.
ಕೆ ಎಸ್ ಮಹಮ್ಮದ್ ಮಸೂದ್ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಮುಖ್ಯಮಂತ್ರಿ ಡಾ. ಎಂ ವೀರಪ್ಪ ಮೊಯಿಲಿ ಉದ್ಘಾಟನೆ ನೆರವೇರಿಸಲಿದ್ದಾರೆ. ವಿಧಾನಸಭಾ ಅಧ್ಯಕ್ಷ ಯುಟಿ ಖಾದರ್ ನವೀಕೃತ ಕಟ್ಟಡದ ಲೋಕಾರ್ಪಣೆ ನೆರವೇರಿಸಲಿದ್ದಾರೆ. ಕಾರ್ಕಳ ಶಾಸಕ ವಿ ಸುನಿಲ್ ಕುಮಾರ್, ಸಂಸ್ಥೆಯ ಶೈಕ್ಷಣಿಕ ಸಲಹೆಗಾರ ಕೆ ಎಸ್ ನಿಸಾರ್ ಅಹಮದ್ ಮತ್ತು ಮುನಿಯಾಲು ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ನ ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಕಳ ಡಾ.ಟಿ ಎಂ ಎ ಪೈ ಆಸ್ಪತ್ರೆಯ ಮುಖ್ಯ ಆರೋಗ್ಯಾಧಿಕಾರಿ ಡಾ. ಕೀರ್ತಿನಾಥ್ ಬಲ್ಲಾಳ್, ಕಾರ್ಕಳ ಕ್ಷೇತ್ರ ಶಿಕ್ಷಣಾಧಿಕಾರಿ ಗಿರಿಜಮ್ಮ, ಕುಕ್ಕುಂದೂರು ಗ್ರಾ.ಪಂ ಅಧ್ಯಕ್ಷೆ ಉಷಾ ಕೆ., ಕಾಲೇಜಿನ ಪ್ರಾಕ್ತನ ವಿದ್ಯಾರ್ಥಿ ಮಿಸ್ಟರ್ ಕರ್ನಾಟಕ ಸ್ಟೈಲ್ ಐಕಾನ್ ವಿಜೇತೆ ಕುಮಾರಿ ಅಪೇಕ್ಷಾ ವಿ ಹೆಗ್ಡೆ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಮಾಜದ ಮೂವರು ಧಾರ್ಮಿಕ ಮುಖಂಡರಾದ ಶ್ರೀ ಕ್ಷೇತ್ರ ಕೇಮಾರು ಸಾಂದೀಪನಿ ಸಾಧನಾಶ್ರಮದ ಶ್ರೀ ಈಶವಿಠಲದಾಸ ಸ್ವಾಮೀಜಿ, ಅತ್ತೂರು ಅಲ್ ಹವಾ ಮಸೀದಿಯ ಇಮಾಮ್ ಮೌಲಾನ ಅಬ್ದುಲ್ ಹಫೀಸ್ ಮತ್ತು ಅತ್ತೂರಿನ ರೆವರ್ ಅಂಡ್ ಫಾದರ್ ಮಲ್ಲೇಶ್ ಪ್ರಜ್ವಲ್ ಆಶೀರ್ವಚನ ನೀಡಲಿದ್ದಾರೆ ಎಂದು ಪ್ರಕಟಣೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.