ಕಾರ್ಕಳ: ಗಿರಿಜನ ದೊಡ್ಡಪ್ರಮಾಣದ ವಿವಿಧೋದ್ಧೇಶ ಸಹಕಾರಿ ಸಂಘದ (ಲ್ಯಾಂಪ್ಸ್) ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಕ್ರಮ ನಡೆದಿದ್ದು, ಚುನಾವಣಾಧಿಕಾರಿ ರೋಹಿತ್ ಕೆ.ಆರ್ ಅವರ ಕುಮ್ಮಕ್ಕಿನಿಂದ ಅಸಿಂಧು ಮತವನ್ನು ಸಿಂಧುಗೊಳಿಸಿ, ಆಕ್ಷೇಪಣೆಯಿದ್ದರೂ ಅದನ್ನು ತಿರಸ್ಕರಿಸಿ ಏಕಾಎಕಿ ಅಧ್ಯಕ್ಷ ಸ್ಥಾನವನ್ನು ಘೋಷಣೆ ಮಾಡಿದ್ದಾರೆ, ಆದ್ದರಿಂದ ತಕ್ಷಣವೇ ಸಹಾಯಕ ಹಾಗೂ ಉಪ ನಿಬಂಧಕರು ಈ ಚುನಾವಣಾ ಪ್ರಕ್ರಿಯೆಯನ್ನು ರದ್ದುಪಡಿಸಬೇಕೆಂದು ಒತ್ತಾಯಿಸಿ ಸಂಘದ ನಿರ್ದೇಶಕರು ಸಂಘದ ಕಚೇರಿಯ ಮುಂಭಾಗದಲ್ಲಿ ಧರಣಿ ನಡೆಸಿದರು.
ಈ ಕುರಿತು ಸಂಘದ ನಿರ್ದೇಶಕ ಬಾಲಗಂಗಾಧರ ಗೌಡ ಮಾತನಾಡಿ, ಚುನಾವಣಾಧಿಕಾರಿ ರೋಹಿತ್ ಕೆ,ಆರ್ ಅವರು ನ್ಯಾಯಯುತ ಚುನಾವಣೆ ನಡೆಸಿಲ್ಲ, ಮತ ಎಣಿಕೆ ಪ್ರಕ್ರಿಯೆ ಸರಿಯಾಗಿಲ್ಲ ನಮ್ಮ ಆಕ್ಷೇಪಣೆಯನ್ನು ತಿರಸ್ಕರಿಸಿ ಚುನಾವಣಾಧಿಕಾರಿ ರೋಹಿತ್ ನಮ್ಮ ಧ್ವನಿ ಅಡಗಿಸುವ ಪ್ರಯತ್ನ ನಡೆಸಿದ್ದಾರೆ ಎಂದು ಆರೋಪಿಸಿದರು. ಅಧ್ಯಕ್ಷ ಸ್ಥಾನದ ಚುನಾವಣೆಯ ಸಂದರ್ಭದಲ್ಲಿ ಇಬ್ಬರು ಸ್ಪರ್ಧಿಗಳಿಗೆ ಸಮಾನ ಮತ ಬಂದಿದ್ದು ಈ ಪೈಕಿ ಒಂದು ಮತವು ಅಸಿಂಧುವಾಗಿತ್ತು.ಆದರೆ ಚುನಾವಣಾಧಿಕಾರಿ ಈ ಅಸಿಂಧು ಮತಪತ್ರವನ್ನು ಸಿಂಧು ಎಂದು ಪರಿಗಣಿಸಿ ಪೂರ್ವಾಗ್ರಹಪೀಡಿತರಾಗಿ ಈ ಹಿಂದಿನ ಅಧ್ಯಕ್ಷ ರಾಘವ ನಾಯ್ಕ್ ಅವರನ್ನೇ ಮೂರನೇ ಅವಧಿಗೆ ಮರುಆಯ್ಕೆ ಮಾಡಿ ಫಲಿತಾಂಶ ಪ್ರಕಟಿಸಿರುವುದು ಸಹಕಾರಿ ನಿಯಮದ ಪ್ರಕಾರ ಕಾನೂನುಬಾಹಿರವಾಗಿದೆ. ಇದಲ್ಲದೇ ಮತ ಎಣಿಕೆಯ ಪ್ರಕ್ರಿಯನ್ನು ಸಂಪೂರ್ಣವಾಗಿ ವಿಡಿಯೋ ಚಿತ್ರೀಕರಣ ಮಾಡಬೇಕು ಆದರೆ ಚುನಾವಣಾಧಿಕಾರಿ ಉದ್ದೇಶಪೂರ್ವಕವಾಗಿ ಮತ ಎಣಿಕೆಯ ಪ್ರಕ್ರಿಯೆಯನ್ನು ವಿಡಿಯೋ ಚಿತ್ರೀಕರಣ ಮಾಡಿಲ್ಲ ಆದ್ದರಿಂದ ಮತ ಎಣಿಕೆ ಪ್ರಕ್ರಿಯೆಯೇ ಕಾನೂನುಬಾಹಿರವಾಗಿದೆ, ಚುನಾವಣಾಧಿಕಾರಿಯ ಈ ನಡೆ ಆದಿವಾಸಿ ಜನಾಂಗದ ಹಕ್ಕನ್ನು ಮೊಟಕುಗೊಳಿಸಿದೆ ಮಾತ್ರವಲ್ಲದೇ ಸಹಕಾರಿ ನಿಯಮಾವಳಿಗೂ ವಿರುದ್ಧವಾಗಿದೆ ಎಂದು ಆರೋಪಿಸಿದರು.
ಆದಿವಾಸಿಗಳು ಸಹಕಾರಿ ಕ್ಷೇತ್ರಕ್ಕೆ ಬರಲು ಹಾಗೂ ಅವರ ಜೀವನ ಮಟ್ಟ ಸುಧಾರಿಸಲು ಸ್ವದ್ಯೋಗಕ್ಕೆ ಕಡಿಮೆ ಬಡ್ಡಿಯಲ್ಲಿ ಸಾಲ ಸೌಲಭ್ಯ ನೀಡುವುದೇ ಲ್ಯಾಂಪ್ಸ್ ಸೊಸೈಟಿಯ ಉದ್ದೇಶವಾಗಿದೆ, ಆದರೆ ಈ ಉದ್ದೇಶಗಳನ್ನು ಲ್ಯಾಂಪ್ಸ್ ಸೊಸೈಟಿಯ ಆಡಳಿತವು ಗಾಳಿತೂರಿ ಬುಡಕಟ್ಟು ಸಮುದಾಯವನ್ನು ದಮನಿಸಲು ಯತ್ನಿಸುತ್ತಿದೆ ಎಂದು ಆರೋಪಿಸಿದರು. ಆದ್ದರಿಂದ ಸಹಕಾರ ಸಂಘಗಳ ಸಹಾಯಕ ಹಾಗೂ ಉಪನಿಬಂಧಕರು ತಕ್ಷಣವೇ ಮಧ್ಯಪ್ರವೇಶಿಸಬೇಕೆಂದು ಆಗ್ರಹಿಸಿದರು.ಬಳಿಕ ಕಾರ್ಯನಿರ್ವಹಣಾಧಿಕಾರಿ ದಿವಾಕರ ಶೆಟ್ಟಿ ಪ್ರತಿಭಟನೆ ಕೈಬಿಡುವಂತೆ ಮನವಿ ಮಾಡಿದರು.ಆದರೆ ಪ್ರತಿಭಟನಾಕಾರರು ಮಣಿಯದ ಹಿನ್ನಲೆಯಲ್ಲಿ ಅಧ್ಯಕ್ಷರು ರಾಜೀನಾಮೆಗೂ ಮುಂದಾಗಿದ್ದರು ಎನ್ನಲಾಗಿದೆ.
ಈ ಸಂದರ್ಭದಲ್ಲಿ ನಿರ್ದೇಶಕರಾದ ಉದಯ ನಾಯ್ಕ್, ರಾಘವೇಂದ್ರ ನಾಯ್ಕ್, ಸುರೇಶ್ ಗೌಡ, ರಮೇಶ್ ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಲ್ಯಾಂಪ್ಸ್ ಸೊಸೈಟಿಯ ವ್ಯವಹಾರದಲ್ಲಿ ಅವ್ಯವಹಾರದ ಆರೋಪ:
ಪರಿಶಿಷ್ಟ ಪಂಗಡದ ಸಮಗ್ರ ಅಭಿವೃದ್ಧಿಗಾಗಿ ಸರ್ಕಾರ ಸ್ಥಾಪಿಸಿರುವ ಲ್ಯಾಂಪ್ಸ್ ಸೊಸೈಟಿಯಲ್ಲಿ ಪರಿಶಿಷ್ಠ ವರ್ಗಗಳ ಸಮುದಾಯದ ಸದಸ್ಯರಿಗೆ ಯಾವುದೇ ರೀತಿಯ ಸಾಲ ಸೌಲಭ್ಯಗಳು ಸಿಗುತ್ತಿಲ್ಲ, ಇದರ ಬದಲಾಗಿ ಅಧಿಕ ಬಡ್ಡಿಗೆ ಭಾರೀ ಮೊತ್ತವನ್ನು ವಾಣಿಜ್ಯ ಉದ್ದೇಶಗಳಿಗೆ ಠೇವಣಿಯನ್ನು ಸಾಲವಾಗಿ ನೀಡಲಾಗುತ್ತಿದೆ ಎನ್ನುವ ಆರೋಪಗಳು ಕೇಳಿಬಂದಿದೆ. ಈ ಹಿಂದಿನ ಅಧ್ಯಕ್ಷರು ಮತ್ತೆ ಅಧ್ಯಕ್ಷರಾಗಿ ಪುನರಾಯ್ಕೆಯಾದ ಬೆನ್ನಲ್ಲೇ ಸಂಘದ ಸದಸ್ಯರು ಬಹಿರಂಗವಾಗಿಯೇ ತಮ್ಮ ಅಸಮಾಧಾನ ಹೊರಹಾಕಿದ್ದರು.
