ಕಾರ್ಕಳ: ಪ್ರತಿ ಹೆತ್ತವರು ತಮ್ಮ ಮಕ್ಕಳಿಗೆ ಅತ್ಯುತ್ತಮ ಶಿಕ್ಷಣವನ್ನು ಕೊಡುವ ಜೊತೆಗೆ ಉತ್ತಮ ಸಂಸ್ಕಾರವನ್ನು ಕಲಿಸುವ ಕೆಲಸ ಮಾಡಬೇಕು. ಮಕ್ಕಳು ದಾರಿ ತಪ್ಪದಂತೆ ಎಚ್ಚರ ವಹಿಸಬೇಕು. ಇದು ಪ್ರತಿಯೊಬ್ಬ ಹೆತ್ತವರ ಜವಾಬ್ದಾರಿ ಎಂದು ಶ್ರೀ ಲಕ್ಷ್ಮೀ ಅಂಬಾಭವಾನಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಮಾಧವ ನಾಯ್ಕ್ ಹೇಳಿದರು.
ಅವರು ಕಾರ್ಕಳ ಹೆಬ್ರಿ ತಾಲೂಕು ಮರಾಠಿ ಸಮಾಜ ಸೇವಾ ಸಂಘ ವತಿಯಿಂದ ಶ್ರೀ ಲಕ್ಷ್ಮೀ ಅಂಬಾಭವಾನಿ ದೇವಸ್ಥಾನ ದುರ್ಗದಲ್ಲಿ ನಡೆದ ಸಾಮೂಹಿಕ ಸತ್ಯನಾರಾಯಣ ಪೂಜೆ, ಮಹಾಸಭೆ, ಸಾಧಕರಿಗೆ ಸನ್ಮಾನ, ವಿದ್ಯಾರ್ಥಿಗಳಿಗೆ ಪುರಸ್ಕಾರ,ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಸಂಘದ ಅಧ್ಯಕ್ಷ ಶೇಖರ್ ಕಡ್ತಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಂಘವು ಸಮಾಜದ ಪ್ರತಿಯೊಬ್ಬನ ಆಸ್ತಿ.ನಾವು ಜನರ ಆಶೋತ್ತರಗಳಿಗೆ ಸ್ಪಂದಿಸಿ, ಕಣ್ಣೀರನ್ನು ಒರೆಸುವ ಕೆಲಸ ಮಾಡಬೇಕು. ಸಂಘ ನನಗೆ ಏನು ಕೊಟ್ಟಿದೆ ಎಂಬುದಕ್ಕಿಂತ ಸಂಘಕ್ಕೆ ನನ್ನ ಕೊಡುಗೆ ಏನು ಎಂದು ಪ್ರಶ್ನಿಸುತ್ತಾ,ಯಾವ ರೀತಿ ತೊಡಗಿಸಿಕೊಂಡಿದ್ದೆನೆಂದು ಅರಿತು ನಡೆಯಬೇಕು. ಸಮಾಜದ ತೀರ ಕಷ್ಟದಲ್ಲಿರುವ ಜನರಿಗೆ ಸಹಾಯ ಮಾಡಿ,ಉತ್ತಮ ಸಾಧನೆ ಮಾಡಿದ ಸಾಧಕರಿಗೆ ಪ್ರೋತ್ಸಾಹಿಸುವ ಕೆಲಸ ಸಂಘದ ವತಿಯಿಂದ ಪ್ರತಿ ವರ್ಷ ನಡೆಯುವಂತಾಗಲು ಸರ್ವರ ಸಹಕಾರ ಅಗತ್ಯ. ಸಂಘಟನೆಯನ್ನು ಬಲ ಪಡಿಸುವ ನಿಟ್ಟಿನಲ್ಲಿ ಕಾಲು ಎಳೆಯುವ ಬದಲು, ಕೈ ಹಿಡಿದು ಮುನ್ನಡೆಸಿ, ಸಮಾಜದ ಅಭಿವೃದ್ಧಿ ಬಗ್ಗೆ ಚಿಂತಿಸುವ ಸಮಾಜ ಬಂಧುಗಳು ಮುಂದೆ ಬರಬೇಕು ಎಂದರು.
ಈ ಸಂದರ್ಭದಲ್ಲಿ ಪಳ್ಳಿ ಗ್ರಾಮದ ಲೀಲಾ ರವರಿಗೆ ವೈದ್ಯಕೀಯ ನೆರವು, ಸಮಾಜದ ಹೆಮ್ಮೆಯ ಸಾಧಕರಾದ ದೇವಿ ಪಾತ್ರಿ ಅಣ್ಣೋಜೀ ನಾಯ್ಕ್ ಬಚ್ಚಪ್ಪು, ನಾಟಿ ವೈದ್ಯೆ- ಶಾಂತ ಇಂದು ನಾಯ್ಕ್ ದುರ್ಗ, ವೈದ್ಯಕೀಯ ಪದವೀಧರೆ ಡಾ.ಸೌಜನ್ಯ ಬಿ ಅಜೆಕಾರು, ಸ್ವದ್ಯೋಗಿ-ಸುಗಂಧಿ ನಾಯ್ಕ್ ಅವರು ಶಿವಪುರ, ಯಕ್ಷಗಾನ ಕಲಾವಿದ ಶಿಕ್ಷಕ- ಸತೀಶ್ ಬೇಳಂಜೆ, ರಾಷ್ಟ್ರೀಯ ಕಬಡ್ಡಿ ಆಟಗಾರ ಶರಣ್ ಮುನಿಯಾಲು ಇವರಿಗೆ ಸನ್ಮಾನಿಸಲಾಯಿತು.ಪಿಯುಸಿ ಮತ್ತು ಎಸ್ಸೆಸ್ಸೆಲ್ಸಿಯಲ್ಲಿ ಗರಿಷ್ಠ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ನಗದು ಪುರಸ್ಕಾರ ಹಾಗೂ ಚಿತ್ರ ಕಲಾ ವಿಜೇತರಿಗೆ ಗೌರವಿಸಲಾಯಿತು.
ವೇದಿಕೆಯಲ್ಲಿ ಸುಧಾಕರ್ ನಾಯ್ಕ್ ಬಂಗ್ಲೆಗುಡ್ಡೆ,ಉಮೇಶ್ ನಾಯ್ಕ್ ಸೂಡ,ನೂತನ ಅಧ್ಯಕ್ಷ ಶಂಕರ ನಾಯ್ಕ್ ದುರ್ಗ,ಬಾಬು ನಾಯ್ಕ್ ಸಾಣೂರು,ರಾಜೇಶ್ ನಾಯ್ಕ್ ಮುನಿಯಾಲು, ರಾಘವೇಂದ್ರ ನಾಯ್ಕ್ ಹೆಬ್ರಿ, ಕೃಷ್ಣ ಬಚ್ಚಪ್ಪು, ಶಶಿಕಲಾ ಹಿರ್ಗಾನ, ರಾಜೇಶ್ವರಿ ನಿಟ್ಟೆ ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಹರೀಶ್ ಇರ್ವತ್ತೂರು ಸ್ವಾಗತಿಸಿ, ಶ್ರೀನಿವಾಸ ನಕ್ರೆ ಲೆಕ್ಕ ಪತ್ರ ಮಂಡಿಸಿದರು.ಪವನ್ ದುರ್ಗ ಧನ್ಯವಾದ ವಿತ್ತರು.ಪದ್ಮಾಕರ್ ನಾಯ್ಕ್,ರೇವತಿ ಮತ್ತು ಪ್ರಜ್ಞಾ ಕಾರ್ಯಕ್ರಮ ನಿರೂಪಿಸಿದರು.