ಕಾರ್ಕಳ: ಮಾವಿನಕಾಯಿ ಮಾರಾಟ ಮಾಡಿದ ಹಣದ ವಿಚಾರವಾಗಿ ಜಗಳ ನಡೆದು ವ್ಯಕ್ತಿಯೊಬ್ಬರಿಗೆ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದಾಗ ರಕ್ಷಣೆಗೆ ಬಂದಿದ್ದ ತಾಯಿಗೂ ಹಲ್ಲೆ ನಡೆಸಿದ ಪರಿಣಾಮ ತಾಯಿ ಮಗ ಇಬ್ಬರೂ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ತಾಲೂಕಿನ ನೂರಾಳ್‌ಬೆಟ್ಟು ಗ್ರಾಮದ ನವೀನ್ ಅವರು ಏ.24 ರಂದು ನೆರೆಮನೆಯ ಐತಪ್ಪ ಮತ್ತು ಅವರ ಮಗ ಪ್ರಕಾಶ ನೊಂದಿಗೆ ಸೇರಿ ಮಾವಿನಕಾಯಿಯನ್ನು ಕೊಯ್ದು ಐತಪ್ಪ ಮತ್ತು ಪ್ರಕಾಶನಲ್ಲಿ ಮಾರಾಟ ಮಾಡಲು ತಿಳಿಸಿದ್ದರು. ಬಳಿಕ ನವೀನ್ ಮಾರಾಟ ಮಾಡಿ ಬಂದ ಹಣ ನೀಡುವಂತೆ ಕೇಳಿದಾಗ ಮನೆಗೆ ಬರುವಂತೆ ತಿಳಿಸಿದ್ದರು. ಅದರಂತೆ ನವೀನ್ ಮಧ್ಯಾಹ್ನ ಐತಪ್ಪರ ಮನೆಗೆ ಹೋಗುವಾಗ ದಾರಿಮಧ್ಯೆ ನೂರಾಲ್‌ಬೆಟ್ಟು ಚಂದ್ರನಾಥ ಖಾಸಗಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಬಳಿ ಐತಪ್ಪ ಮತ್ತು ಪ್ರಕಾಶ ನವೀನ್ ನನ್ನು ತಡೆದು ನಿಲ್ಲಿಸಿ ಅವಾಚ್ಯ ಶಬ್ದಗಳಿಂದ ಬೈದು ಎದೆಗೆ ಕಲ್ಲಿನಿಂದ ಹೊಡೆದು ತುಳಿದು ಹಲ್ಲೆ ನಡೆಸಿದಾಗ ನವೀನ್ ಬೊಬ್ಬೆ ಹೊಡೆದಿದ್ದು, ಅವರ ರಕ್ಷಣೆಗೆಂದು ತಾಯಿ ಸುಲೋಚನ ಬಂದಿದ್ದು ಅರೋಪಿಗಳು ಅವರನ್ನೂ ದೂಡಿದ್ದರು. ಇದರಿಂದಾಗಿ ಸುಲೋಚನ ಅವರಿಗೂ ಬೆನ್ನಿಗೆ ನೋವಾಗಿದ್ದು, ತಾಯಿ ಮಗ ಇಬ್ಬರೂ ಕಾರ್ಕಳದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.