ಕಾರ್ಕಳ: ಕಾರ್ಕಳ ಪುರಸಭೆಯ ಅಧ್ಯಕ್ಷ ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿಜೆಪಿ ಸರಳ ಬಹುಮತದಿಂದ ಪುರಸಭೆ ಆಡಳಿತ ಚುಕ್ಕಾಣಿ ಹಿಡಿದಿದೆ.
ಅಧ್ಯಕ್ಷರಾಗಿ ಯೋಗೀಶ್ ದೇವಾಡಿಗ ಹಾಗೂ ಉಪಾಧ್ಯಕ್ಷರಾಗಿ ಪ್ರಶಾಂತ್ ಕೋಟ್ಯಾನ್ ಆಯ್ಕೆಯಾಗಿದ್ದಾರೆ.
ಬಿಜೆಪಿಯಿಂದ ಅಧ್ಯಕ್ಷ ಸ್ಥಾನಕ್ಕೆ ಯೋಗೀಶ್ ದೇವಾಡಿಗ ಹಾಗೂ ಕಾಂಗ್ರೆಸ್ ನಿಂದ ಶುಭದ ರಾವ್ ಸ್ಪರ್ಧಿಸಿದ್ದರು. ಉಪಾಧ್ಯಕ್ಷ ಸ್ಥಾನಕ್ಕೆ ವಿನ್ನಿಬೋಲ್ಡ್ ಮೆಂಡೋನ್ಸಾ ಕಾಂಗ್ರೆಸ್ ನಿಂದ ಹಾಗೂ ಪ್ರಶಾಂತ್ ಕೋಟ್ಯಾನ್ ಬಿಜೆಪಿಯಿಂದ ಸ್ಪರ್ಧಿಸಿದ್ದರು. ಅಂತಿಮವಾಗಿ ಬಿಜೆಪಿಯ ಯೋಗೀಶ್ ದೇವಾಡಿಗ 13 ಮತಗಳನ್ನು ಪಡೆದು ಜಯಗಳಿಸಿದರೆ,ಶುಭದ ರಾವ್ 11 ಮತಗಳನ್ನು ಪಡೆದರು. ಬಿಜೆಪಿಯಿಂದ ಪ್ರಶಾಂತ್ ಕೋಟ್ಯಾನ್ 13 ಮತಗಳನ್ನು ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದು, ವಿನ್ನಿಬೋಲ್ಡ್ 11 ಮತಗಳನ್ನು ಪಡೆದರು.
ಚುನಾವಣೆಯಲ್ಲಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಸುನಿಲ್ ಕುಮಾರ್ ಮತಚಲಾಯಿಸಿದರು.
ಕಾರ್ಕಳ ತಹಶಿಲ್ದಾರ್ ಪ್ರತಿಭಾ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು.
ಮುಖ್ಯಾಧಿಕಾರಿ ರೂಪಾ ಶೆಟ್ಟಿ ಉಪಸ್ಥಿತರಿದ್ದರು
ಪಕ್ಷೇತರ ಸದಸ್ಯ ಲಕ್ಷ್ಮೀನಾರಾಯಣ ಮಲ್ಯ ಚುನಾವಣೆಗೆ ಗೈರಾಗಿದ್ದರೆ,ಕಾಂಗ್ರೆಸ್ ಬಿಜೆಪಿಯ ಎಲ್ಲಾ ಸದಸ್ಯರು ಭಾಗವಹಿಸಿದ್ದರು.
ಕಾರ್ಕಳದ ಸಮಗ್ರ ಅಭಿವೃದ್ಧಿಗೆ ಎಲ್ಲರ ಸಹಕಾರ ಬೇಕು: ಶಾಸಕ ಸುನಿಲ್ ಕುಮಾರ್
ಚುನಾವಣೆಯಲ್ಲಿ ಗೆದ್ದ ಅಭ್ಯರ್ಥಿಗಳನ್ನು ಅಭಿನಂದಿಸಿದ ಶಾಸಕ ಸುನಿಲ್ ಕುಮಾರ್, ಕಾರ್ಕಳದ ಅಭಿವೃದ್ಧಿಗೆ ಪುರಸಭೆಯ ಎಲ್ಲಾ 23 ಸದಸ್ಯರ ಸಹಕಾರ ಬೇಕು. ಸಾರ್ವಜನಿಕರ ಕುಂದುಕೊರತೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರದ ಅನುದಾನವನ್ನು ಸಮರ್ಥವಾಗಿ ಬಳಸಿಕೊಂಡು ಉತ್ತಮ ಆಡಳಿತ ನೀಡುವಂತಾಗಲಿ ಎಂದರು.
ಸಂಸದ ಕೋಟ ಶ್ರೀನಿವಾಸ ಪೂಜಾರಿ ನೂತನ ಅಧ್ಯಕ್ಷ ಉಪಾಧ್ಯಕ್ಷರನ್ನು ಅಭಿನಂದಿಸಿ ಮಾತನಾಡಿ,ಕೇವಲ ಒಂದು ವರ್ಷದ ಅವಧಿಗೆ ಚುನಾವಣೆ ನಡೆದಿದ್ದು ಇದರಿಂದ ಅಭಿವೃದ್ಧಿ ಚಟುವಟಿಕೆಗಳಿಗೆ ಹಿನ್ನಡೆಯಾಗುತ್ತದೆ ಆದ್ದರಿಂದ ಸರ್ಕಾರ ಎರಡೂವರೆ ವರ್ಷದ ಅವಧಿಗೆ ಪುರಸಭೆ ಅಧಿಕಾರ ಅವಧಿಯನ್ನು ವಿಸ್ತರಿಸಬೇಕು ಎಂದು ಆಗ್ರಹಿಸಿದರು
`