ಕಾರ್ಕಳ, ಅ.23: ಪುರಸಭೆಯ ವ್ಯಾಪ್ತಿಯ ರಸ್ತೆಗಳು ಹೊಂಡಾಗುಂಡಿಯಾಗಿದ್ದು, ಒಳಚರಂಡಿ ವ್ಯವಸ್ಥೆ ಹದಗೆಟ್ಟ ಪರಿಣಾಮ ಕೊಳಚೆ ನೀರು ರಸ್ತೆಯಲ್ಲಿ ಹರಿಯುತ್ತಿದ್ದರೂ ಜನರ ಸಮಸ್ಯೆಗಳನ್ನು ಕೇಳುವವರಿಲ್ಲ. ಅಧಿಕಾರಿಗಳು ಕಚೇರಿ ಬಿಟ್ಟು ಹೊರಗಡೆ ಬಂದು ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರ ಕಂಡುಕೊಳ್ಳಲು ಪ್ರಾಮಾಣಿಕ ಪ್ರಯತ್ನ ನಡೆಸಬೇಕು ಎಂದು ಪುರಸಭಾ ಸದಸ್ಯರು ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಗುರುವಾರ ಕಾರ್ಕಳ ಪುರಸಭಾಧ್ಯಕ್ಷ ಯೋಗೀಶ್ ದೇವಾಡಿಗ ಅಧ್ಯಕ್ಷತೆಯಲ್ಲಿ ನಡೆದ ಪುರಸಭೆ ಸಾಮಾನ್ಯ ಸಭೆಯಲ್ಲಿ ಆಡಳಿತ ಹಾಗೂ ವಿಪಕ್ಷ ಕಾಂಗ್ರೆಸ್ ಸದಸ್ಯರು ರಸ್ತೆ ಗುಂಡಿಗಳ ಕುರಿತು ಗಂಭೀರ ಚರ್ಚೆ ನಡೆಸಿದರು.
ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ 10 ಜನ ಪೌರಕಾರ್ಮಿಕರಿಗೆ ದೀಪಾವಳಿ ಕಳೆದರೂ ವೇತನ ಪಾವತಿ ಆಗಿಲ್ಲ ಎಂದು ಸದಸ್ಯ ಶುಭದ ರಾವ್ ಪ್ರಸ್ತಾಪಿಸಿದಾಗ,ಇದಕ್ಕೆ ಅಧ್ಯಕ್ಷ ಯೋಗೀಶ್ ದೇವಾಡಿಗ ಉತ್ತರಿಸಿ,ಸರ್ಕಾರದ ಜಾತಿ ಸಮೀಕ್ಷೆ ಹಾಗೂ ಗುತ್ತಿಗೆದಾರರು ಕಾರ್ಮಿಕರ ಪಟ್ಟಿ ಕೊಡುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ವೇತನ ಪಾವತಿ ತಡವಾಗಿದೆ. ಈಗಾಗಲೇ ಚೆಕ್ ಮೂಲಕ ಪಾವತಿಸಲಾಗಿದೆ ಎಂದರು. ಆದರೆ ಕಾರ್ಮಿಕರಿಗೆ ನೀಡಿದ ಚೆಕ್ ಕ್ಲಿಯರೆನ್ಸ್ ಆಗಿಲ್ಲವೆಂದು ಸದಸ್ಯ ವಿವೇಕಾನಂದ ಶೆಣೈ ಸಭೆಯ ಗಮನಕ್ಕೆ ತಂದಾಗ ಅಧ್ಯಕ್ಷರು ಪರಿಶೀಲಿಸುವುದಾಗಿ ಹೇಳಿದರು.
ಪುರಸಭೆ ವ್ಯಾಪ್ತಿಯಲ್ಲಿ ಅಕ್ರಮವಾಗಿ ನೀರಿನ ಸಂಪರ್ಕ ಕಲ್ಪಿಸಲಾಗಿದ್ದರೂ ಈ ಕುರಿತು ಪುರಸಭೆ ಕ್ರಮ ಕೈಗೊಂಡಿಲ್ಲ ಎಂದು ಸುಮಾ ಕೇಶವ ಸಭೆಯ ಗಮನಕ್ಕೆ ತಂದರು.
ಪುರಸಭೆ ವ್ಯಾಪ್ತಿಯಲ್ಲಿ ಪರವಾನಗಿ ಇಲ್ಲದೇ ಹೂವಿನ ವ್ಯಾಪಾರ ಮಾಡುತ್ತಿದ್ದು, ಇವರ ವಿರುದ್ಧ ಕ್ರಮಕೈಗೊಳ್ಳಲು ಶುಭದ ರಾವ್, ವಿವೇಕಾನಂದ ಶೆಣೈ ಒತ್ತಾಯಿಸಿದರು. ಇದೇವೇಳೆ ಇದಕ್ಕೆ ದನಿಗೂಡಿಸಿದ ಸೋಮನಾಥ ನಾಯ್ಕ್ ಲೈಸೆನ್ಸ್ ಪಡೆಯದೇ ಮಾರಿಯಮ್ಮ ಫ್ಲವರ್ ಸ್ಟಾಲ್ ಅಂಗಡಿ ಹಾಕಿಕೊಂಡಿದ್ದು ಅವರ ವಿರುದ್ಧ ಸೂಕ್ತ ಕ್ರಮಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಬಂಗ್ಲೆಗುಡ್ಡೆ ಪರಿಸರದಲ್ಲಿ ಕೆಸರುಮಿಶ್ರಿತ ಕುಡಿಯುವ ನೀರು ಪೂರೈಕೆಯಾಗುತ್ತಿದೆ ಟ್ಯಾಂಕ್ ಕ್ಲೀನ್ ಮಾಡಬೇಕು ಎಂದು ಪ್ರತಿಮಾ ರಾಣೆ ಸಭೆಯಲ್ಲಿ ಪ್ರಸ್ತಾಪಿಸಿದಾಗ,ಇದಕ್ಕೆ ಅಧ್ಯಕ್ಷ ಯೋಗೀಶ್ ದೇವಾಡಿಗ ಉತ್ತರಿಸಿ ಮಳೆನೀರು ಸೇರಿ ಈ ಸಮಸ್ಯೆ ಆಗಿದೆ, ಸರಿಪಡಿಸುವ ಭರವಸೆ ನೀಡಿದರು.
ತೆಳ್ಳಾರು ರಸ್ತೆಯ ಚರಂಡಿಯಲ್ಲಿ ಹೂಳು ತುಂಬಿದ್ದು ಮಳೆ ನೀರು ಹರಿಯಲು ಸಮಸ್ಯೆ
ಹರೀಶ್ ಕುಮಾರ್ ಸಭೆಯ ಗಮನ ಸೆಳೆದರು.
ಅಂಬೇಡ್ಕರ್ ಕಂಚಿನ ಪ್ರತಿಮೆ ನಿರ್ಮಾಣದ ಕುರಿತು ಕೊಟೆಷನ್ ಕರೆಯಲಾಗಿರುವ ಕುರಿತು ಪ್ರತಿಮಾ ರಾಣೆ ಪ್ರಶ್ನಿಸಿದಾಗ ,ಈಗಾಗಲೇ 15 ಲಕ್ಷ ರೂ ಅಂದಾಜು ಪಟ್ಟಿ ತಯಾರಿಸಿ ದರಪಟ್ಟಿ ಆಹ್ವಾನಿಸಿದ್ದು, ಆಸಕ್ತ ಬಿಡ್ಡುದಾರರು ಬಂದಿಲ್ಲ ಈ ಕುರಿತು ಮರು ದರಪಟ್ಟಿ ಕರೆಯಲಾಗುವುದು ಎಂದು ಕಿರಿಯ ಅಭಿಯಂತರರಾದ ರೇಣುಕಾ ಸಭೆಯ ಗಮನಕ್ಕೆ ತಂದರು.
ಅನಧಿಕೃತ ಬ್ಯಾನರ್ ಹೋರ್ಡಿಂಗ್ ಗಳಿಂದ ವಾಹನ ಸವಾರರಿಗೆ ಕಿರಿಕಿರಿಯಾಗುತ್ತಿದ್ದು, ಪುರಸಭೆ ವ್ಯಾಪ್ತಿಯ ಜಂಕ್ಷನ್’ಗಳಲ್ಲಿ ಅಪಘಾತ ಸಂಭವಿಸುತ್ತಿವೆ.ಆದ್ದರಿಂದ ಸಾರ್ವಜನಿಕರು ಮೌಖಿಕವಾಗಿ ದೂರು ನೀಡಿದರೂ ಕ್ರಮ ಕೈಗೊಳ್ಳಬೇಕೆಂದು ಅಧ್ಯಕ್ಷ ಯೋಗೀಶ್ ದೇವಾಡಿಗ ಅಧಿಕಾರಿಗಳಿಗೆ ಸೂಚಿಸಿದರು.
ವೇದಿಕೆಯಲ್ಲಿ ಪುರಸಭಾ ಉಪಾಧ್ಯಕ್ಷ ಪ್ರಶಾಂತ್ ಕೋಟ್ಯಾನ್ ಉಪಸ್ಥಿತರಿದ್ದರು.