Share this news

ಕಾರ್ಕಳ: ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ವಾಸಿಸಲು ಸ್ವಂತ ಮನೆ ಕಟ್ಟುವವರ ಕನಸಿಗೆ ರಾಜ್ಯ ಕಾಂಗ್ರೆಸ್ ಸರ್ಕಾರ ಕೊಳ್ಳಿಯಿಟ್ಟಿದೆ. ಪಂಚಾಯತ್ ಮಟ್ಟದಲ್ಲಿ ಆಗಬೇಕಿದ್ದ 9/11ಎ ನಿವೇಶನದ ಖಾತಾ ಪಡೆಯಲು ದೂರದ ಕಾಪು ಪ್ರಾಧಿಕಾರಕ್ಕೆ ಅಲೆದಾಡುವ ಸ್ಥಿತಿ ನಿರ್ಮಾಣವಾಗಿದ್ದು,ಸರ್ಕಾರ ಈ ಕ್ಲಿಷ್ಟ ನಿಯಮಾವಳಿ ಸರಳೀಕರಣ ಮಾಡಬೇಕೆಂದು ಕಾರ್ಕಳ ತಾಲೂಕು ಪಂಚಾಯತ್ ರಾಜ್ ಒಕ್ಕೂಟದ ಅದ್ಯಕ್ಷ ಸಂತೋಷ ಶೆಟ್ಟಿ ಹಿರ್ಗಾನ ಒತ್ತಾಯಿಸಿದರು.

ಅವರು ಜು.17 ರಂದು ಪಂಚಾಯತ್ ರಾಜ್ ಒಕ್ಕೂಟದ ವತಿಯಿಂದ ಕಾರ್ಕಳದ ರಾಮ ಮಂದಿರ ಸಭಾ ಭವನದಲ್ಲಿ ನಡೆದ ಖಂಡನಾ ಸಭೆಯಲ್ಲಿ ಮಾತನಾಡಿ, ಈ ಹಿಂದೆ 25 ಸೆಂಟ್ಸ್ ವರೆಗೆ 9/11ಎ ನಿವೇಶನ ಖಾತಾ ನೀಡಲು ಪಂಚಾಯಿತಿಗಳಿಗೆ ಹಾಗೂ 1 ಎಕರೆ ಮಿತಿಗೊಳಿಸಿ ತಾಲೂಕು ಪಂಚಾಯಿತಿಗೆ ಅಧಿಕಾರ ನೀಡಲಾಗಿತ್ತು. ಆದರೆ ಈಗ ಪಂಚಾಯಿತಿಗಳ ಅಧಿಕಾರ ಮೊಟಕುಗೊಳಿಸಿ ಕಾಪು ಪ್ರಾಧಿಕಾರಕ್ಕೆ ಅಧಿಕಾರ ನೀಡಲಾಗಿದೆ. ರಾಜ್ಯ ಸರ್ಕಾರದ ಈ ಆದೇಶದಿಂದಾಗಿ ಕಾರ್ಕಳ ತಾಲೂಕಿನ 500/600 ಕಡತಗಳು ಕಾಪು ಪ್ರಾಧಿಕಾರ ಕಚೇರಿಯಲ್ಲಿ ವಿಲೇವಾರಿಯಾಗದೇ ಬಾಕಿ ಉಳಿದಿವೆ.ಇದಲ್ಲದೇ ಕೇವಲ ಒಬ್ಬ ಅಧಿಕಾರಿ ಎರಡು ತಾಲೂಕಿನ ಕಡತಗಳನ್ನು ವಿಲೇವಾರಿ ಮಾಡಬೇಕು. ಕಳೆದ 4 ತಿಂಗಳಿನಿಂದ ಒಂದೇ ಒಂದು 9/11ಎ ಅರ್ಜಿ ಇತ್ಯರ್ಥವಾಗಿಲ್ಲ,ಇದರ ಜೊತೆಗೆ ಆಶ್ರಯ ಯೋಜನೆ,94c, ಅಕ್ರಮ ಸಕ್ರಮ ಅರ್ಜಿಗಳು ಕೂಡ ವಿಲೇವಾರಿ ಆಗುತ್ತಿಲ್ಲ ಎಂದು ಸಂತೋಷ್ ಶೆಟ್ಟಿ ಆರೋಪಿಸಿದರು.ಒಂದು 9/11ಎ ಖಾತಾಗೆ ಅನುಮೋದನೆ ನೀಡಲು 7 ತಿಂಗಳು ತಗಲುತ್ತದೆ.ಇದು ಮಧ್ಯವರ್ತಿಗಳಿಗೆ ಹಣ ಮಾಡಲು ಅವಕಾಶ ಮಾಡಿಕೊಟ್ಟಂತಾಗಿದೆ.ಬಡವರು 40/50 ಸಾವಿರ ಹಣ ಕೊಟ್ಟು 9/11ಎ ಖಾತಾ ಪಡೆಯುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿದರು. ಆದ್ದರಿಂದ 9/11ಎ ವ್ಯವಸ್ಥೆಗೆ ಸರಳೀಕರಣವಾಗಬೇಕು.ಈ ಹಿಂದೆ ಇರುವಂತೆ ಪಂಚಾಯತ್ ಗಳಿಗೆ ಅಧಿಕಾರ ಕೊಡಬೇಕು ಎಂದು ಒತ್ತಾಯಿಸಿದರು.


ಸಂಪನ್ಮೂಲ ವ್ಯಕ್ತಿಯಾಗಿ ಪಂಚಾಯತ್ ರಾಜ್ ಒಕ್ಕೂಟದ ಕಾನೂನು ಸಲಹೆಗಾರ ಸೂರಜ್ ಜೈನ್ ಮಾತನಾಡಿ, 9/11 ಸಮಸ್ಯೆ ಹಾಗೂ ಕಟ್ಟಡ ನಿರ್ಮಾಣ ಸಾಮಾಗ್ರಿಗಳ‌ ಸಮಸ್ಯೆಯಿಂದ ಜನಸಾಮಾನ್ಯರು ಪರದಾಡುವಂತಾಗಿದ್ದು, ಮುಂದಿನ ದಿನಗಳಲ್ಲಿ ಜನ ಸರ್ಕಾರದ ವಿರುದ್ಧ ಬೀದಿಗಿಳಿದು ಹೋರಾಟ ನಡೆಸುತ್ತಾರೆ. ಆದ್ದರಿಂದ ಸರ್ಕಾರ ಸರಳೀಕೃತ ವ್ಯವಸ್ಥೆ ತರಬೇಕೆಂದರು.
ರಾಘವೇಂದ್ರ ಆಚಾರ್ಯ ಸ್ವಾಗತಿಸಿ, ಸುನಿಲ್ ಹೆಗ್ಡೆ ಕಾರ್ಯಕ್ರಮ ನಿರೂಪಿಸಿದರು. ಸತೀಶ್ ಪೂಜಾರಿ ಎಳ್ಳಾರೆ ವಂದಿಸಿದರು.

 

Leave a Reply

Your email address will not be published. Required fields are marked *