
ಕಾರ್ಕಳ,ಮಾ.11:ಭಾರತೀಯ ಸೇನೆಯಲ್ಲಿ 19 ವರ್ಷ ಹಾಗೂ16 ವರ್ಷಗಳ ಸಬ್ ಇನ್ಸ್ಪೆಕ್ಟರ್ ಆಗಿ ಕಾರ್ಕಳ ಸೇರಿದಂತೆ ಉಡುಪಿ ಜಿಲ್ಲೆಯ ಹಲವಾರು ಕಡೆಗಳಲ್ಲಿ ಸೇವೆ ಸಲ್ಲಿಸಿ ಇತ್ತೀಚಿಗೆ ಉಡುಪಿ ಪೊಲೀಸ್ ಮ್ಯಾರಥಾನ್ ಸಂದರ್ಭದಲ್ಲಿ ಕುಸಿದು ಬಿದ್ದು ಹೃದಯಘಾತದಿಂದ ನಿಧನ ಹೊಂದಿದ ನಾಸಿರ್ ಹುಸೇನ್ ಅವರಿಗೆ ನುಡಿ ನಮನ ಕಾರ್ಯಕ್ರಮವು ರೋಟರಿ ಕ್ಲಬ್, ಜೇಸಿಸ್ ಆಶ್ರಯದಲ್ಲಿ ಕಾರ್ಕಳ ಕಿಸಾನ್ ಸಭಾ ಟ್ರಸ್ಟಿನ ಸಭಾಂಗಣದಲ್ಲಿ ನಡೆಯಿತು.
ಕಾಂಗ್ರೆಸ್ ಮುಖಂಡ, ಉದಯ ಕೃಷ್ಣಯ್ಯ ಶೆಟ್ಟಿ ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ಮಾತನಾಡಿ, ತನ್ನ ವೃತ್ತಿ ಬದುಕಿನುದ್ದಕ್ಕೂ ಸಾಮಾಜಿಕ ಬದ್ಧತೆಯೊಂದಿಗೆ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡಿದ್ದ ನಾಸೀರ್ ಹುಸೇನ್ ಅವರ ಕರ್ತವ್ಯ ಪ್ರಜ್ಞೆ ಸದಾ ಸ್ಮರಣೀಯ. ಅವರ ಅಕಾಲಿಕ ಮರಣ ಸಮಾಜಕ್ಕೆ ತುಂಬಲಾರದ ನಷ್ಟ ಎಂದರು .
ಕಾರ್ಕಳ ವೃತ್ತ ನಿರೀಕ್ಷಕ ಮಂಜಪ್ಪ ಡಿ.ಆರ್ ಮಾತನಾಡಿ, ಪೊಲೀಸ್ ಅಧಿಕಾರಿಯಾಗಿ ಜಾತಿ,ಮತ ಧರ್ಮ ಮೀರಿ ಕಾನೂನಿನೊಂದಿಗೆ ಮಾನವೀಯತೆಯಲ್ಲೇ ಕಾರ್ಯನಿರ್ವಹಿಸಿರುವ ನಾಸಿರ್ ಹುಸೇನ್ ಗಳಿಸಿದ ಜನರ ಅಪಾರ ಪ್ರೀತಿ,ವಿಶ್ವಾಸವೇ ದೊಡ್ಡ ಸಂಪತ್ತಾಗಿತ್ತು ಎಂದರು .
ಬಿಜೆಪಿ ಕ್ಷೇತ್ರಾಧ್ಯಕ್ಷ ನವೀನ್ ನಾಯಕ್ ಮಾತನಾಡಿ, ಕೋವಿಡ್ ಸಂಕಷ್ಟ ಕಾಲದಲ್ಲಿ ನಾಸಿರ್ ಹುಸೇನ್ ಅವರ ಸೇವೆ ಕರ್ತವ್ಯ ನಿಷ್ಠೆ, ಕಾರ್ಯತತ್ಪರತೆ ಸಾರ್ವಜನಿಕವಾಗಿ ಪ್ರಶಂಶನೀಯ ಸಮಾಜದಲ್ಲಿ ಶಾಂತಿ, ಸೌಹಾರ್ದತೆ ಕಾಪಾಡುವಲ್ಲಿ ಶ್ರಮಿಸಿದ ಅವರು ಆದರ್ಶಪ್ರಾಯರು ಎಂದರು.
ಸರ್ ಹಿಂದ್ ಶಿಕ್ಷಣ ಸಂಸ್ಥೆ ಮುಖ್ಯಸ್ಥ, ಕಾರ್ಕಳ ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಮೊಹಮ್ಮದ್ ಶರೀಫ್ ಮಾತನಾಡಿ , ಕರ್ತವ್ಯದಲ್ಲಿ ನ್ಯಾಯ, ನೀತಿ, ನಿಷ್ಠೆ, ಕಾರ್ಯ ತತ್ಪರತೆಗೆ ಮತ್ತೊಂದು ಹೆಸರು ನಾಸಿರ್ ಹುಸೇನ್. ತನ್ನ ಜೀವನದಲ್ಲಿ ಧಾರ್ಮಿಕತೆಯ ಜೊತೆಗೆ ಮಾನವೀಯತೆಯನ್ನು ಅಳವಡಿಸಿಕೊಂಡು ಕೇವಲ ಪೊಲೀಸ್ ಅಧಿಕಾರಿಯಾಗಿರದೆ ಕಾನೂನಿನ ಚೌಕಟ್ಟಿನಲ್ಲಿ ಸಮಾಜದ ತಪ್ಪುಗಳನ್ನು ತಿದ್ದುವ ಅಪೂರ್ವ ವ್ಯಕ್ತಿತ್ವ ಹೊಂದಿದ್ದರು ಎಂದರು .
ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆ ಉಪನಿರೀಕ್ಷಕ ಪ್ರಸನ್ನ ಎಂ.ಎಸ್. ಮಾತನಾಡಿ, ನಾಸಿರ್ ಹುಸೇನ್ ಅವರು ನಮ್ಮ ಇಲಾಖೆಯಲ್ಲಿ ಸದಾ ಲವಲವಿಕೆಯಿಂದ ಕೂಡಿದ ವ್ಯಕ್ತಿಯಾಗಿದ್ದರು. ಪ್ರತಿ ಕಾರ್ಯಕ್ರಮದಲ್ಲೂ ಕ್ರೀಯಾಶೀಲರಾಗಿ ಕಾರ್ಯ ಪ್ರವೃತ್ತರಾಗುವ ಇವರು ಚಿಕ್ಕಮಗಳೂರಿನ ದತ್ತಜಯಂತಿ ವೇಳೆ 10 ಸಾವಿರ ಮಂದಿ ಪೊಲೀಸರಿಗೆ ವಸತಿ ವ್ಯವಸ್ಥೆ ಕಲ್ಪಿಸಿದ ಪರಿ ಕರ್ತವ್ಯಪರತೆಗೆ ಸಾಕ್ಷಿ ಎಂಬಂತಿತ್ತು ಎಂದರು.
ಕಾರ್ಕಳ ಜೇಸಿಐ ಅಧ್ಯಕ್ಷ ಅವಿನಾಶ್ ಶೆಟ್ಟಿ ಹಾಗೂ ರೋಟರಿ ಅಧ್ಯಕ್ಷ ನವೀನ್ಚಂದ್ರ ಶೆಟ್ಟಿ ಮಾತನಾಡಿ, ನಾಸೀರ್ ಹುಸೇನ್ ಅವರು ಜನರೊಂದಿಗೆ ಸ್ನೇಹಿತರಂತೆ ಬೆರೆತವರು. ನಾಸಿರ್ ಅವರು ಕಾರ್ಕಳದ ಜನರ ಮನಸ್ಸಲ್ಲಿ ಸದಾ ಸ್ಮರಣೀಯರಾಗಿರುತ್ತಾರೆ ಎಂದರು.
ದ.ಕ. ಜಿಲ್ಲಾ ಹಾಲು ಉತ್ಪಾದಕರ ಒಕ್ಕೂಟದ ಉಪಾಧ್ಯಕ್ಷ ಉದಯ ಎಸ್. ಕೋಟ್ಯಾನ್, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ, ಜಮೀಯ್ಯತುಲ್ ಫಲಹ್ ದಕ್ಷಿಣ ಕನ್ನಡ ಉಡುಪಿ ಜಿಲ್ಲಾಧ್ಯಕ್ಷ, ಪುರಸಭಾ ಮಾಜಿ ಸದಸ್ಯ ಅಶ್ಫಕ್ ಅಹ್ಮದ್, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತರ ಘಟಕದ ಅಧ್ಯಕ್ಷ ಶೇಖ್ ಶಬ್ಬೀರ್, ಉದ್ಯಮಿ ಶೋಧನ್ ಹೆಗ್ಡೆ, ಉದಯ ಕುಮಾರ್ ಹೆರ್ಮುಂಡೆ ನಾಸಿರ್ ಹುಸೇನ್ ರವರ ಸೇವೆ ಕಾರ್ಯವನ್ನು ಮುಕ್ತ ಕಂಠದಿಂದ ಶ್ಲಾಘಿಸಿದರು.
ಜಲ್ವಾ ಎ ನೂರ್ ನ ಮೌಲನ ಸಯ್ಯದ್ ರಝ ಮೃತರ ಸದ್ಗತಿಗಾಗಿ ದುವಾ ನೆರವೇರಿಸಿದರು.
ಈ ಸಂದರ್ಭದಲ್ಲಿಉಡುಪಿ ಮುಸ್ಲಿಂ ಒಕ್ಕೂಟ ಕಾರ್ಕಳ ತಾಲೂಕು ಅಧ್ಯಕ್ಷ ಮೊಹಮ್ಮದ್ ಗೌಸ್, ರೋಟರಿ ಕ್ಲಬ್ ಅಧ್ಯಕ್ಷ ನವೀನ್ ಶೆಟ್ಟಿ, , ಕರ್ನಾಟಕ ಮುಸ್ಲಿಮ್ ಜಮಾತ್ ಕಾರ್ಕಳ ಅಧ್ಯಕ್ಷ ನಾಸಿರ್ ಶೇಕ್, ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟಿನ ಅಧ್ಯಕ್ಷ ಅವಿನಾಶ್ ಶೆಟ್ಟಿ, ಸೇವಾದಳ ಅಧ್ಯಕ್ಷ ಶೇಕ್ ಅಬ್ದುಲ್ಲಾ ಪುಲ್ಕೆರಿ, ಕುಕ್ಕುಂದೂರು ಗ್ರಾಮ ಪಂಚಾಯತ್ ಸದಸ್ಯ ಅರುಣ್ ಕುಮಾರ್ ಶೆಟ್ಟಿ,ಕಾರ್ಕಳ ಕಾಂಗ್ರೆಸ್ ಅಲ್ಪ ಸಂಖ್ಯಾತರ ಘಟಕದ ಅಧ್ಯಕ್ಷ ಶೇಕ್ ಶಬ್ಬೀರ್ ಮಿಯ್ಯಾರು, ಜೆ ಸಿ ಐ ಝೋನ್ 15 ರ ಕಾರ್ಯದರ್ಶಿ ಸಮದ್ ಖಾನ್ ಮಹಿಳಾ ಕಾಂಗ್ರೆಸ್ ಕೆ ಅನಿತಾ ಡಿಸೋಜಾ ಬೆಳ್ಮಣ್,ಕಾರ್ಕಳ ಗ್ರಾಮಾಂತರ ಪಿ ಎಸ್ ಐ ಪ್ರಸನ್ನ ಕುಮಾರ್, ಕಾರ್ಕಳ ನಗರ ಪಿಎಸ್ಐ ಮುರಳೀಧರ, ಪಿಎಸ್ಐ ಗಳಾದ ಶಿವಕುಮಾರ್ ಎಸ್ ಆರ್, ಮಹೇಶ್ ಟಿ ಎಂ,ಶಕ್ತಿವೇಲು,ಅನಿಲ್ ಚಂದ್ರಶೇಖರ ಹಾಗೂ ನೂರಾರು ಪೊಲೀಸ್ ಸಿಬ್ಬಂದಿಗಳು ಕಾರ್ಕಳದ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಕನ್ನಡ ಸಾಹಿತ್ಯ ಪರಿಷತ್ ಕಾರ್ಕಳ ಅಧ್ಯಕ್ಷ ಕೊಂಡಳ್ಳಿ ಪ್ರಭಾಕರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.


.
.
.
.
.
.
.
.
.
.
