
ಕಾರ್ಕಳ,ಏ.06: ಕಾರ್ಕಳ ಕೌಡೂರು ಗ್ರಾಮದ ರೌಡಿ ಶೀಟರ್ ಗಣೇಶ್ ಪೂಜಾರಿ(48) ಎಂಬಾತನನ್ನು ಪೊಲೀಸರು ಗೂಂಡಾ ಕಾಯ್ದೆಯಡಿ ಬಂಧಿಸಿ ಜೈಲಿಗಟ್ಟಿದ್ದಾರೆ.
ಈತನ ವಿರುದ್ಧ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಂಡಿದ್ದು, ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಗೆ ಧಕ್ಕೆ ತರುತ್ತಿದ್ದ ಈತನನ್ನು ಗೂಂಡಾ ಕಾಯ್ದೆಯಡಿ ಬಂಧಿಸಲು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರು.
ಕೌಡೂರು ಗ್ರಾಮದ ನಿವಾಸಿ ಗಣೇಶ್ ಪೂಜಾರಿ ಹಲವು ವರ್ಷಗಳಿಂದ ಕಾರ್ಕಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ರೌಡಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದು, ಈತನ ವಿರುದ್ಧ ಕೊಲೆಯತ್ನ, ದರೋಡೆ, ಹಲ್ಲೆ ಸೇರಿದಂತೆ ಒಟ್ಟು 11 ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. ಈ ಪ್ರಕರಣಗಳ ಪೈಕಿ ಒಂದು ಪ್ರಕರಣದಲ್ಲಿ ಶಿಕ್ಷೆಯಾಗಿದ್ದು, ಏಳು ಪ್ರಕರಣಗಳಲ್ಲಿ ಖುಲಾಸೆಗೊಂಡಿದ್ದಾನೆ. ಉಳಿದಂತೆ ಒಂದು ಪ್ರಕರಣ ನ್ಯಾಯಾಂಗ ವಿಚಾರಣೆಯಲ್ಲಿದ್ದರೆ, ಎರಡು ಪ್ರಕರಣಗಳು ಪ್ರಸ್ತುತ ತನಿಖಾ ಹಂತದಲ್ಲಿವೆ.
ಆರೋಪಿಯ ನಿರಂತರ ಅಪರಾಧ ಚಟುವಟಿಕೆಗಳನ್ನು ಗಮನಿಸಿದ ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು (SP), ಆತನ ವಿರುದ್ಧ ಗೂಂಡಾ ಕಾಯ್ದೆ ಜಾರಿಗೊಳಿಸುವಂತೆ ವರದಿ ಸಲ್ಲಿಸಿದ್ದರು. ಈ ವರದಿಯನ್ನು ಪುರಸ್ಕರಿಸಿದ ಜಿಲ್ಲಾ ದಂಡಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳು ಬಂಧನಕ್ಕೆ ಅಧಿಕೃತ ಆದೇಶ ನೀಡಿದ್ದರು.
















.
.
.
.
.
.
.
.
.
.
