ಕಾರ್ಕಳ: ಅಪ್ಪ ಅಮ್ಮನ ಜಗಳವನ್ನು ಬಿಡಿಸಲು ನಡುವೆ ಹೋದ ಮಗಳು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಕಾರ್ಕಳ ತಾಲೂಕಿನ ಕೆರ್ವಾಶೆ ಎಂಬಲ್ಲಿ ನಡೆದಿದೆ. ಭಾರತಿ ಹಾಗೂ ರಾಮಣ್ಣ ದಂಪತಿಗಳು ಆಗಾಗ ವಿನಾಕಾರಣ ಕಿತ್ತಾಡುತ್ತಿದ್ದರು. ಇವರಿಬ್ಬರ ನಡುವೆ ಜೂ 29ರಂದು ಶನಿವಾರ ಜಗಳವಾಗಿ, ಪತ್ನಿ ಭಾರತಿ ತನ್ನ ಮಗಳು ದಿಶಾಳ ಜತೆ ತವರು ಮನೆಗೆ ಹೋಗಿದ್ದರು. ಮರುದಿನ ಭಾನುವಾರ ಸಂಜೆ ವಾಪಾಸು ಮನೆಗೆ ಬಂದಾಗ, ತಾಯಿ ಮನೆಗೆ ಹೋದ ವಿಚಾರ ಕೆದಕಿ ಜಗಳಕ್ಕೆ ಇಳಿದ ಪತಿ ರಾಮಣ್ಣ ಏಕಾಎಕಿ ಕತ್ತಿ ಹಿಡಿದುಕೊಂಡು ನಿನ್ನನ್ನು ಬಿಡುವುದಿಲ್ಲ ಎಂದು ಕತ್ತಿಯಿಂದ ಭಾರತಿಯವರಿಗೆ ಕಡಿಯಲು ಮುಂದಾದಾಗ ಮಗಳು ದಿಶಾ ತನ್ನ ತಂದೆ ರಾಮಣ್ಣ ಅವರನ್ನು ತಡೆದು ಕೈಯಲ್ಲಿದ್ದ ಕತ್ತಿ ಎಳೆಯಲು ಮುಂದಾದಾಗ ರಾಮಣ್ಣ ಮಗಳು ದಿಶಾಳ ಕೈಯನ್ನು ತಿರುಗಿಸಿ ತಳ್ಳಿದ ಪರಿಣಾಮ ಕೈ ನೋವಿನಿಂದ ನರಳುತ್ತಿದ್ದ ಆಕೆಯನ್ನು ಭಾರತಿಯವರು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಪತ್ನಿ ಹಾಗೂ ಮಗಳ ಮೇಲೆ ಹಲ್ಲೆ ನಡೆಸಿದ ರಾಮಣ್ಣ ವಿರುದ್ಧ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.