ಮಂಗಳೂರು: ನಿನ್ನೆಯಷ್ಟೇ ಬಂಧನಕ್ಕೀಡಾಗಿದ್ದ ಖತರ್ನಾಕ್ ”ಚಡ್ಡಿ ಗ್ಯಾಂಗ್”ನ ದರೋಡೆಕೋರರನ್ನು ಸ್ಥಳಮಹಜರಿಗಾಗಿ ಕರೆದುಕೊಂಡು ಹೋಗಿದ್ದ ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ ಘಟನೆ ನಡೆದಿದೆ.
ಮಂಗಳೂರಿನಲ್ಲಿ ಸರಣಿ ದರೋಡೆ ಬೆನ್ನಲ್ಲೇ ಸಕಲೇಶಪುರದಲ್ಲಿ ನಿನ್ನೆ ಅವರನ್ನು ಬಂಧಿಸಲಾಗಿತ್ತು. ಮಧ್ಯಪ್ರದೇಶದ ರಾಜು ಸಿಂಗ್ವಾನಿಯ (24), ಮಯೂರ್ (30), ಬಾಲಿ (22), ವಿಕ್ಕಿ (21) ಬಂಧಿತ ಆರೋಪಿಗಳಾಗಿದ್ದಾರೆ. ಸಕಲೇಶಪುರದಿಂದ ಬಂಧಿಸಿ ಕರೆತಂದಿದ್ದ ಆರೋಪಿಗಳನ್ನು ಮುಲ್ಕಿ ಸಮೀಪ ಸ್ಥಳ ಮಹಜರಿಗೆ ತೆರಳಿದ ಸಂದರ್ಭ ಎಎಸ್ ಐ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದ ಕಾರಣಕ್ಕೆ ಮಂಗಳೂರು ಪೊಲೀಸರು ಚಡ್ಡಿ ಗ್ಯಾಂಗ್ ಮೇಲೆ ಗುಂಡು ಹಾರಿಸಿದ್ದು, ಇಬ್ಬರಿಗೆ ಕಾಲಿಗೆ ಗುಂಡು ತಗುಲಿ ವೆನ್ಲಾಕ್ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಂಗಳವಾರ ಮುಂಜಾನೆ ನಗರದ ಮನೆಯೊಂದಕ್ಕೆ ದರೋಡೆಕೋರರು ನುಗ್ಗಿ ದಂಪತಿ ಮೇಲೆ ಹಲ್ಲೆ ನಡೆಸಿ 16 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಮತ್ತು ನಗದು ಲೂಟಿ ಮಾಡಿ ಪರಾರಿಯಾಗಿದ್ದರು. ಘಟನೆ ನಡೆದ ಕೇವಲ 5 ಗಂಟೆಯೊಳಗೆ ಮಂಗಳೂರು ಮತ್ತು ಹಾಸನ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಸಕಲೇಶಪುರದಲ್ಲಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದರು.
ಬರ್ಮುಡಾ ಚಡ್ಡಿ ಮತ್ತು ಬನಿಯನ್ ಧರಿಸಿದ್ದ 4 ಜನ ಯುವಕರ (ಚೆಡ್ಡಿ ಗ್ಯಾಂಗ್) ಟೀಂ ಮಂಗಳೂರಿನಲ್ಲಿ ಹಲವು ಕಡೆ ದರೋಡೆ ನಡೆಸಿತ್ತು. ಪ್ರಕರಣ ನಡೆದ ಮಾಹಿತಿ ಬಂದ ಕೂಡಲೇ ಉರ್ವಾ ಠಾಣೆಯ ಪೊಲೀಸ್ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದ್ದರು. ಅದರಲ್ಲಿ ಕೆ.ಎಸ್.ಅರ್.ಟಿ.ಸಿ ಬಸ್ಸಿನಲ್ಲಿ ವ್ಯಕ್ತಿಗಳು ಮಂಗಳೂರು ಕಡೆಗೆ ಪ್ರಯಾಣಿಸಿದ್ದು ಕಂಡು ಬಂದಿತ್ತು. ಕೆ.ಎಸ್.ಅರ್.ಟಿ.ಸಿ ಬಸ್ ಸಿಬ್ಬಂದಿ ವಿಚಾರಿಸಿದಾಗ ಬಸ್ ಹಾಸನ ಕಡೆ ತೆರಳ್ತಿರೋದು ಪತ್ತೆಯಾಗಿತ್ತು. ಈ ವಿಷಯವನ್ನು ಹಾಸನ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ತಿಳಿಸಿ ಸಕಲೇಶಪುರ ಡಿವೈಎಸ್ಪಿ ನೇತೃತ್ವದಲ್ಲಿ ನಾಲ್ಕು ಜನರು ವಶಕ್ಕೆ ಪಡೆದು ಮಂಗಳೂರಿಗೆ ಕರೆತರಲಾಗಿತ್ತು.
