ಕಾರ್ಕಳ: ಬಿಜೆಪಿಯ ಸಾಮಾನ್ಯ ಕಾರ್ಯಕರ್ತನಾಗಿ, ಸಂಘಟನೆಯ ಜವಾಬ್ದಾರಿ ಹಾಗೂ ಬಿಜೆಪಿ ಕಾರ್ಯದರ್ಶಿಯಾಗಿ ಅತ್ಯಂತ ಸರಳ ವ್ಯಕ್ತಿತ್ವದ ಕಿಶೋರ್ ಕುಮಾರ್ ಬಿಜೆಪಿ ಅಭ್ಯರ್ಥಿಯಾಗಿ ವಿಧಾನ ಪರಿಷತ್ ಚುನಾವಣೆಗೆ ಸ್ಪರ್ಧಿಸಿದ್ದು ಅವರ ಗೆಲುವು ನಿಶ್ಚಿತ ಎಂದು ಕಾರ್ಕಳ ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್ ವಿಶ್ವಾಸ ವ್ಯಕ್ತಪಡಿಸಿದರು.
ಅವರು ಶನಿವಾರ ಕಾರ್ಕಳ ಬಿಜೆಪಿ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ,ಕಿಶೋರ್ ಕುಮಾರ್
ಅಪ್ಪಟ ದೇಶಪ್ರೇಮಿ, ಕಾಶ್ಮೀರದ ಲಾಲ್ ಚೌಕ್ ನಲ್ಲಿ ಭಯೋತ್ಪಾದಕರ ಸವಾಲನ್ನು ಎದುರಿಸಿ ಜೀವದ ಹಂಗು ತೊರೆದು ರಾಷ್ಟ್ರ ಧ್ವಜವನ್ನು ಹಾರಿಸಿ ಭಯೋತ್ಪಾದಕರಿಗೆ ಸೆಡ್ಡು ಹೊಡೆದಿದ್ದರು. ಸವಿತಾ ಸಮಾಜದಂತಹ ಸಣ್ಣ ಸಮುದಾಯದ ವ್ಯಕ್ತಿಗೆ ಬಿಜೆಪಿ ಅವಕಾಶ ಕೊಡುವ ಮೂಲಕ ಸಾಮಾಜಿಕ ನ್ಯಾಯ ಪರಿಪಾಲನೆ ಮಾಡಿದೆ.ಬಿಜೆಪಿ ಎಂದಿಗೂ ಜಾತಿ ಲೆಕ್ಕಾಚಾರದಲ್ಲಿ ರಾಜಕಾರಣ ಮಾಡುತ್ತಿಲ್ಲ ಆದರೆ ಕಾಂಗ್ರೆಸ್ ಇದೀಗ ಜಾತಿ ಲೆಕ್ಕಾಚಾರದಲ್ಲಿ ಮತ ಪಡೆಯುವ ಹುನ್ನಾರ ಮಾಡುತ್ತಿದೆ ಎಂದು ಆರೋಪಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಕಳೆದ ಒಂದೂವರೆ ವರ್ಷದಿಂದ ಆಡಳಿತ ನಡೆಸುತ್ತಿದ್ದು, ವಸತಿ ಯೋಜನೆಗೆ ನಯಾಪೈಸೆ ಅನುದಾನ ಬಿಡುಗಡೆಯಾಗಿಲ್ಲ,ಕರೆಂಟ್ ಬಿಲ್ ಕಟ್ಟಲು ಕೂಡ ಪಂಚಾಯತ್ ಬಳಿ ಹಣವಿಲ್ಲ, ಅಂಗನವಾಡಿ ಕಾರ್ಯಕರ್ತರಿಗೆ ಸರಿಯಾಗಿ ವೇತನ ಪಾವತಿಯಾಗುತ್ತಿಲ್ಲ.ಈಗಾಗಲೇ ರಾಜ್ಯ ಸರ್ಕಾರ ದಿವಾಳಿಯಾಗಿದೆ ಎಂದು ಆರೋಪಿಸಿದರು.
ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮಣಿರಾಜ ಶೆಟ್ಟಿ ಮಾತನಾಡಿ,
ಚುನಾವಣೆ ಸಂದರ್ಭದಲ್ಲಿ ಮಾತ್ರ ಕಾಂಗ್ರೆಸ್ ಜಾತಿ ಲೆಕ್ಕಾಚಾರದಲ್ಲಿ ಮತ ಪಡೆಯುವ ತಂತ್ರಗಾರಿಕೆ ನಡೆಸುತ್ತದೆ. ಆದರೆ ಪ್ರಬುದ್ಧ ಮತದಾರರು ಬಿಜೆಪಿಯ ಸಾಮಾನ್ಯ ಅಭ್ಯರ್ಥಿಯನ್ನು ಗೆಲ್ಲಿಸುತ್ತಾರೆ ಎಂದರು
ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಮಹಾವೀರ ಹೆಗ್ಡೆ, ಬಿಜೆಪಿ ವಕ್ತಾರ ರವೀಂದ್ರ ಮೊಯ್ಲಿ ಉಪಸ್ಥಿತರಿದ್ದರು.