ಮಂಗಳೂರು: ಅವಿಭಜಿತ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಗಳನ್ನೊಳಗೊಂಡ ದಕ್ಷಿಣ ಕನ್ನಡ ಹಾಲು ಒಕ್ಕೂಟದ ನೂತನ ಅಧ್ಯಕ್ಷರಾಗಿ ಕೊಡವೂರು ರವಿರಾಜ ಹೆಗ್ಡೆ ಹಾಗೂ ಉಪಾಧ್ಯಕ್ಷರಾಗಿ ಉದಯ ಎಸ್.ಕೋಟ್ಯಾನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನೂತನ ನಿರ್ದೇಶಕ ಮಂಡಳಿಯ ಅಧ್ಯಕ್ಷ ಉಪಾಧ್ಯಕ್ಷರ ಆಯ್ಕೆಗೆ ಮೇ.6ರಂದು ಮಂಗಳವಾರ ಚುನಾವಣೆ ನಿಗದಿಯಾಗಿತ್ತು. ಒಟ್ಟು 16 ಸದಸ್ಯ ಬಲದ ಪೈಕಿ ರಾಜೇಂದ್ರ ಕುಮಾರ್ ಬಣವಾದ ಹೈನುಗಾರರ ಬಳಗವು 10 ಸ್ಥಾನ ಪಡೆದಿದ್ದು, ಸಹಕಾರ ಭಾರತಿ ಬಣವು ಕೇವಲ 6 ಸ್ಥಾನಗಳನ್ನು ಪಡೆದಿತ್ತು. ಈ ಹಿನ್ನಲೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ರವಿರಾಜ್ ಹೆಗ್ಡೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಉದಯ ಎಸ್ ಕೋಟ್ಯಾನ್ ಮಾತ್ರ ನಾಮಪತ್ರ ಸಲ್ಲಿಸಿದ ಹಿನ್ನಲೆಯಲ್ಲಿ ಇಬ್ಬರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಅಚ್ಚರಿಯೆಂದರೆ ಕಳೆದ ಸಾಲಿನಲ್ಲಿ ರವಿರಾಜ ಹೆಗ್ಡೆ ಹಾಗೂ ಉದಯ ಎಸ್.ಕೋಟ್ಯಾನ್ ಇಬ್ಬರೂ ಬಿಜೆಪಿ ಬೆಂಬಲಿತ ಸಹಕಾರ ಭಾರತಿಯಿಂದ ನಿರ್ದೇಶಕರಾಗಿ ಆಯ್ಕೆಯಾಗಿದ್ದರು. ಈ ಪೈಕಿ ರವಿರಾಜ್ ಹೆಗ್ಡೆ ಸಹಕಾರ ಭಾರತಿಯಿಂದ ಅಧ್ಯಕ್ಷರಾಗಿದ್ದರು.