

ನವದೆಹಲಿ, ಆಗಸ್ಟ್ 20: ಧರ್ಮಸ್ಥಳದ ವಿರುದ್ಧ ಅಪಪ್ರಚಾರಕ್ಕೆ ಯೂಟ್ಯೂಬರ್ಗಳಿಗೆ ವಿದೇಶಗಳಿಂದ ಹಣ ಸಂದಾಯವಾಗುತ್ತಿದೆ ಎಂಬ ಆರೋಪದ ಬಗ್ಗೆ ಜಾರಿ ನಿರ್ದೇಶನಾಲಯದಿಂದ ತನಿಖೆ ಮಾಡಿಸಬೇಕು ಎಂದು ಕೋರಿ ಬಿಜೆಪಿ ಸಂಸದ ಕೋಟ ಶ್ರೀನಿವಾಸ ಪೂಜಾರಿ ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಶ್ರೀನಿವಾಸ ಪೂಜಾರಿ, ಗುಂಪೊಂದು ಧರ್ಮಸ್ಥಳದ ಪಾವಿತ್ರ್ಯತೆ ಹಾಳು ಮಾಡಲು ಸಂಚು ರೂಪಿಸಿರುವ ಬಗ್ಗೆ ವರದಿಯಾಗಿದೆ. ಸ್ವತಃ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆದಿದೆ ಎಂದು ಬಹಿರಂಗವಾಗಿ ಹೇಳಿದ್ದಾರೆ. ಎಡಪಂಥೀಯ ಗುಂಪುಗಳ ಮನವಿ ಮೇರೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ದಕ್ಷಿಣ ಕನ್ನಡದ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ ಗುಂಡೂರಾವ್ ಸಹ ಹೇಳಿದ್ದಾರೆ. ಅನಾಮಿಕ ದೂರುದಾರನ ಮಾತುಗಳನ್ನು ನಂಬಿಕೊಂಡು ಸಿಎಂ ಸಿದ್ದರಾಮಯ್ಯನವರು ಎಸ್‌ಐಟಿ ರಚಿಸಿದ್ದಾರೆ ಎಂದೂ ವರದಿಯಾಗಿದೆ. ಇಡೀ ಸರ್ಕಾರವೇ ಅನಾಮಿಕ ವ್ಯಕ್ತಿಗೆ ಶರಣಾದಂತೆ ಕಾಣುತ್ತಿದೆ ಎಂದು ಹೇಳಿದ್ದಾರೆ.
ಬಾಹುಬಲಿ ಬೆಟ್ಟದ ಸಮೀಪ ಸೇರಿದಂತೆ ಧರ್ಮಸ್ಥಳದಲ್ಲಿ ಎಲ್ಲೆಂದರಲ್ಲಿ ಉತ್ಖನನ ನಡೆಸಲಾಗಿದೆ. ಇದರಿಂದ ಭಕ್ತರಿಗೆ ಕಸಿವಿಸಿ ಉಂಟಾಗುತ್ತಿದೆ. ತಮಿಳುನಾಡಿನ ರಾಜಕಾರಣಿಯೊಬ್ಬ ಕಾಂಗ್ರೆಸ್ ಹೈಕಮಾಂಡ್ ಮೇಲೆ ಒತ್ತಡ ತಂದು ಕರ್ನಾಟಕದ ಹಿಂದೂಗಳ ಭಾವನೆಗೆ ಧಕ್ಕೆ ತರಲು ಯೋಜನೆ ಮಾಡಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಧರ್ಮಸ್ಥಳಕ್ಕೆ ಮಸಿ ಬಳಿಯಲು ಮುಸ್ಲಿಂ ಯೂಟ್ಯೂಬರ್ ಮತ್ತು ಸಹಚರರಿಗೆ ವಿದೇಶದಿಂದ ಹಣಕಾಸು ನೆರವು ದೊರೆತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆದ್ದರಿಂದ ನನ್ನ ಮನವಿಯನ್ನು ಗಂಭೀರವಾಗಿ ಪರಿಗಣಿಸಿ ಧರ್ಮಸ್ಥಳದ ಮಂಜುನಾಥ ಸ್ವಾಮಿಯನ್ನು ವಿರೋಧಿಸುತ್ತಿರುವವರಿಗೆ ವಿದೇಶದಿಂದ ಹಣಕಾಸಿನ ನೆರವು ಬಂದಿರುವ ಬಗ್ಗೆ ಜಾರಿ ನಿರ್ದೇಶನಾಲಯದ ಮೂಲಕ ತನಿಖೆ ನಡೆಸಬೇಕೆಂದು ಒತ್ತಾಯಿಸುತ್ತೇನೆ ಎಂದು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.














