ಕುಂದಾಪುರ: ನಕ್ಸಲ್ ಚಟುವಟಿಕೆ ತ್ಯಜಿಸಿ ಫೆ. 2ರಂದು ಶರಣಾದ ನಕ್ಸಲ್ ಲಕ್ಷ್ಮೀ ತೊಂಬಟ್ಟು ಅವರ 6 ದಿನಗಳ ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆಯಲ್ಲಿ ಬುಧವಾರ ಕುಂದಾಪುರದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ಕಾಲ ನ್ಯಾಯಾಂಗ ಬಂಧನ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
ಬುಧವಾರ ಕುಂದಾಪುರದ ಹೆಚ್ಚುವರಿ ಸಿವಿಲ್ ಮತ್ತು ಜೆಎಂಎಫ್ಸಿ ನ್ಯಾಯಾಧೀಶರ ಮುಂದೆ ಲಕ್ಷ್ಮೀ ಅವರನ್ನು ಹಾಜರುಪಡಿಸಿದ್ದು, ನ್ಯಾಯಾಧೀಶರು ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಅದರಂತೆ ಅವರನ್ನು ಮಂಗಳೂರಿನ ಜೈಲಿಗೆ ಸ್ಥಳಾಂತರಿಸಲಾಗಿದೆ.
ನಕ್ಸಲ್ ಲಕ್ಷ್ಮೀ ಅವರನ್ನು ಕುಂದಾಪುರ ಉಪವಿಭಾಗದ ಮೂರು ಪ್ರಕರಣಗಳ ಸಲುವಾಗಿ ಕಳೆದ ಶುಕ್ರವಾರ ಕುಂದಾಪುರ ಪೊಲೀಸರು ಕಸ್ಟಡಿಗೆ ಪಡೆದುಕೊಂಡಿದ್ದರು. ಪ್ರಕರಣ ಸಂಬಂಧ ಕುಂದಾಪುರ ಉಪವಿಭಾಗದ ಡಿವೈಎಸ್ಪಿ ಎಚ್.ಡಿ. ಕುಲಕರ್ಣಿ ಅವರ ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ. ಅಂದಿನ ಅಮಾಸೆಬೈಲು ಠಾಣೆ ವ್ಯಾಪ್ತಿಗೊಳಪಡುವ 3 ಪ್ರಕರಣಗಳಲ್ಲಿ ಲಕ್ಷ್ಮೀ ಆರೋಪಿಯಾಗಿದ್ದಾರೆ. ನಕ್ಸಲ್ ಸಂಬಂಧಿತ ಚಟುವಟಿಕೆಗಳು ಭಿತ್ತಿಪತ್ರ, ಕರಪತ್ರ ಹಾಗೂ ಪ್ರಕರಣವೊಂದರಲ್ಲಿ ಕೂಂಬಿಂಗ್ ವೇಳೆ ಪೊಲೀಸರ ಮೇಲೆ ದಾಳಿ (ಕೊಲೆ ಯತ್ನ) ಪ್ರಕರಣಗಳು ಈಕೆಯ ವಿರುದ್ಧ ದಾಖಲಾಗಿದ್ದವು.