Share this news

ಉಡುಪಿ : ಕೊಲ್ಲೂರು ಶ್ರೀಮೂಕಾಂಬಿಕಾ ದೇವಸ್ಥಾನದ ಆದಾಯವನ್ನು ಅನಗತ್ಯವಾಗಿ ಸರಕಾರದ ಇತರ ಯೋಜನೆಗಳಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬುದಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ಮಾಹಿತಿ ಹಾಗೂ ವಿಚಾರ ಸಂಪೂರ್ಣವಾಗಿ ಸತ್ಯಕ್ಕೆ ದೂರವಾಗಿದೆ ಎಂದು ದೇವಳದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಬಾಬು ಶೆಟ್ಟಿ ತಗ್ಗರ್ಸೆ ಹಾಗೂ ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ್ ಶೆಟ್ಟಿ ಜಂಟಿ ಹೇಳಿಕೆಯಲ್ಲಿ ಸ್ಪಷ್ಟಪಡಿಸಿದ್ದಾರೆ.

ಭಕ್ತಾಧಿಗಳು ಈ ಸುಳ್ಳು ಸುದ್ದಿಯನ್ನು ನಂಬಬಾರದು. ದೇವಸ್ಥಾನಕ್ಕೆ ಬರುವ ಭಕ್ತರ ಹಣವನ್ನು ಸದುದ್ದೇಶಗಳಿಗೆ ಮಾತ್ರ ಬಳಕೆ ಮಾಡಲಾಗುತ್ತಿದೆ. ಕಾನೂನು ತಜ್ಞರಿಂದ ಸಲಹೆಯನ್ನು ಪಡೆದುಕೊಂಡು ಈ ರೀತಿ ಕಪೋಲಕಲ್ಪಿತ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಭಕ್ತರನ್ನು ಗೊಂದಲಕ್ಕೆ ಸಿಲುಕಿಸುತ್ತಿರುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆಯೂ ಚಿಂತನೆ ಮಾಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

ದೇವಸ್ಥಾನಕ್ಕೆ ಬರುವ ಭಕ್ತರು ನೀಡುವ ಸೇವೆ, ಕಾಣಿಕೆ ಹಾಗೂ ಇತರ ಮೂಲಗಳಿಂದ ಸಂಗ್ರಹವಾಗುವ ಒಟ್ಟು ಮೊತ್ತವನ್ನು ಈ ಮೇಲೆ ವಿವರಿಸಿರುವ ದೇವಳದ ದೈನಂದಿನ ಹಾಗೂ ವಿಶೇಷ ಕಾರ್ಯಕ್ರಮಗಳಿಗಾಗಿ ಖರ್ಚು ಮಾಡಿ, ಉಳಿಕೆಯಾದ ಹಣವನ್ನು ದೇವಳದ ಹೆಸರಿನಲ್ಲಿ ಬ್ಯಾಂಕ್ಗಳಲ್ಲಿ ನಿರಖು ಠೇವಣೆಯನ್ನು ಇರಿಸಲಾಗುವುದು. ಸರಕಾರದ ಒಪ್ಪಿಗೆಯನ್ನು ನಿಯಮಾನುಸಾರ ಪಡೆದುಕೊಂಡು ದೇವಸ್ಥಾನದ ಅಭಿವೃದ್ಧಿ ಕಾರ್ಯಗಳು ಹಾಗೂ ಇತರ ಅಗತ್ಯ ವೆಚ್ಚಗಳಿಗೆ ಮಾತ್ರ ದೇವಸ್ಥಾನದ ಆದಾಯವನ್ನು ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ

Leave a Reply

Your email address will not be published. Required fields are marked *