ಉಡುಪಿ: ಶಿರ್ವ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಲ್ಲೊಟ್ಟು ಎಂಬಲ್ಲಿ ರಾತ್ರಿ ಮನೆಯ ಜಗಲಿಯಲ್ಲಿ ಮಲಗಿದ್ದ ವ್ಯಕ್ತಿಯೋರ್ವರ ಮೇಲೆ ಚಿರತೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಘಟನೆ ರವಿವಾರ ರಾತ್ರಿ ನಡೆದಿದೆ.
ಬಿಹಾರ ಮೂಲದ ಕಾರ್ಮಿಕ ಸುರೇಂದ್ರ (55 ವ) ಗಾಯಗೊಂಡ ವ್ಯಕ್ತಿ. ಆತ ಕಲ್ಲೊಟ್ಟು ಸಂತೋಷ್ ಪೂಜಾರಿ ಅವರ ಮನೆಯ ಹೊರಗಡೆಯ ಸಿಟೌಟಿನಲ್ಲಿ ಮಲಗಿದ್ದು,ತಡರಾತ್ರಿ ಆಹಾರ ಅರಸಿಕೊಂಡು ಬಂದ ಚಿರತೆ ದಾಳಿ ನಡೆಸಿದೆ. ಚಿರತೆ ಸುರೇಂದ್ರ ಅವರ ಕುತ್ತಿಗೆಗೆ ಬಾಯಿ ಹಾಕಿ ಉಗುರಿನಿಂದ ಕೆನ್ನೆ, ಗಲ್ಲ ಮತ್ತು ಮುಖಕ್ಕೆ ಗಂಭೀರವಾಗಿ ಗಾಯಗೊಳಿಸಿದೆ.
ಆತ ಜೋರಾಗಿ ಕೂಡಿಕೊಂಡಾಗ ಸ್ಥಳೀಯರು ಓಡಿಬಂದು ಆತನನ್ನು ತಕ್ಷಣವೇ ಉಡುಪಿಯ ಅಜ್ಜರಕಾಡು ಜಿಲ್ಲಾ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಆತಂಕದಲ್ಲಿ ಜೀವನ ನಡೆಸುತ್ತಿರುವ ಗ್ರಾಮಸ್ಥರು!
ಕಲ್ಲೊಟ್ಟು, ಸೊರ್ಪು, ಆಗೋಳಿಬೈಲು, ಪದವು ಪರಿಸರದಲ್ಲಿ ಕಳೆದ ಕೆಲವು ಸಮಯಗಳಿಂದ ಚಿರತೆ ಓಡಾಡುತ್ತಿದ್ದು ಗ್ರಾಮಸ್ಥರು ಭಯಭೀತರಾಗಿದ್ದಾರೆ. ಕಳೆದೆರಡು ದಿನಗಳಲ್ಲಿ ಕಲ್ಲೊಟ್ಟು ಸಂಗೀತಾ ನಾಯ್ಕ ಅವರ ಮನೆಯ ಎರಡು ಸಾಕು ನಾಯಿಗಳನ್ನು ಚಿರತೆ ಬೇಟೆಯಾಡಿ ನಾಯಿಗಳೆರಡನ್ನೂ ತಿಂದು ಹಾಕಿದೆ.
ಕಳೆದ ನವೆಂಬರ್‌ನಲ್ಲಿ ಇದೇ ಪರಿಸರದ ಕಲ್ಲೊಟ್ಟು ದೇವಣ್ಣ ನಾಯಕ್ ಅವರ ಮನೆಯ ಸಾಕು ನಾಯಿಯನ್ನು ಚಿರತೆ ಬೇಟೆಯಾಡಿ ಅರ್ಧ ತಿಂದು ಹಾಕಿ ಉಳಿದರ್ಧ ದೇಹವನ್ನು ಮಲ್ಲಿಗೆ ಗಿಡದ ತೋಟದ ಬಳಿ ಬಿಟ್ಟು ಹೋಗಿತ್ತು.ಈ ರಸ್ತೆಯಲ್ಲಿ ಪ್ರತೀದಿನ ಶಿರ್ವದ ವಿವಿಧ ಶಾಲಾ ಕಾಲೇಜುಗಳಿಗೆ ಕಾಲ್ನಡಿಗೆಯಲ್ಲಿ ಹೋಗುವ ಪುಟಾಣಿ ಮಕ್ಕಳು ಹಾಗೂ ವಿದ್ಯಾರ್ಥಿಗಳಿಗೆ ಭಾರೀ ಅಪಾಯ ಎದುರಾಗುವ ಸಾಧ್ಯತೆಯಿದ್ದು ಅರಣ್ಯಾಧಿಕಾರಿಗಳು ಚಿರತೆ ಸೆರೆ ಹಿಡಿಯಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ಗಾಯಾಳು ವ್ಯಕ್ತಿಗೆ ಪರಿಹಾರ ನೀಡಲು ಕ್ರಮ:
ಚಿರತೆ ದಾಳಿಯಿಂದ ಗಾಯಗೊಂಡ ಸುರೇಂದ್ರ ಅವರನ್ನು ಉಪ ವಲಯ ಅರಣ್ಯಾಧಿಕಾರಿ ಜೀವನದಾಸ್ ಶೆಟ್ಟಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ದಾರೆ. ಮಹಜರು ನಡೆಸಿ ಸರಕಾರದಿಂದ ಗರಿಷ್ಠ ಪರಿಹಾರ ನೀಡಲು ಪ್ರಯತ್ನಿಸಲಾಗುವುದು ಎಂದು ಪಡುಬಿದ್ರಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಜೀವನ್ ದಾಸ್ ಶೆಟ್ಟಿ ಭರವಸೆ ನೀಡಿದ್ದಾರೆ