ಮಂಗಳೂರು: ಸಾಲ ಕೊಡುವುದಾಗಿ ಕೋಟ್ಯಂತರ ರೂ ಹಣ ಪಡೆದು ಉದ್ಯಮಿಗಳಿಗೆ ವಂಚಿಸುತ್ತಿದ್ದ ಖತರ್ನಾಕ್ ವಂಚಕನನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ . ರೋಹನ್ ಸಲ್ಡಾನಾ (45) ಬಂಧಿತ ಆರೋಪಿ.ರೋಹನ್ ಗುರುವಾರ ರಾತ್ರಿ ತನ್ನ ಐಷರಾಮಿ ಬಂಗಲೆಯಲ್ಲಿ ಮಲೇಶಿಯಾ ಯುವತಿರ ಜೊತೆ ಪಾರ್ಟಿ ಮಾಡುತ್ತಿರುವಾಗಲೇ ದಿಢೀರ್ ದಾಳಿ ನಡೆಸಿದ ಪೊಲೀಸರು ಆತನನ್ನು ಬಂಧಿಸಿದ್ದಾರೆ.
ದೇಶದ ಐಷಾರಾಮಿ ವ್ಯಕ್ತಿಗಳು ಮತ್ತು ಉದ್ಯಮಿಗಳೇ ಈತನ ಟಾರ್ಗೆಟ್. ಸುಮಾರು ವರ್ಷಗಳಿಂದ ಇದನ್ನೇ ಕಾಯಕ ಮಾಡಿಕೊಂಡಿರುವ ರೋಹನ್ 200 ಕೋಟಿಗೂ ಅಧಿಕ ಹಣ ವಂಚಿಸಿದ್ದಾನೆ.
ಈತ ಭೂ ವ್ಯವಹಾರ ಉದ್ಯಮಿಯೆಂದು ಬಿಂಬಿಸಿಕೊಂಡು ಶ್ರೀಮಂತರ ವಿಶ್ವಾಸ ಗಳಿಸಿ, ಹೊರರಾಜ್ಯ, ಹೊರ ಜಿಲ್ಲೆಯ ಶ್ರೀಮಂತ ವ್ಯಕ್ತಿಗಳಿಗೆ ಗಾಳ ಹಾಕುತ್ತಿದ್ದ. ಮಂಗಳೂರಿನ ಜಪ್ಪಿನಮೊಗರುವಿನ ಐಷಾರಾಮಿ ಬಂಗಲೆಗೆ ಕರೆದು ವ್ಯವಹಾರ ಮಾಡುತ್ತಿದ್ದ. ಈತನ ಬಂಗಲೆ, ಜೀವನಶೈಲಿಗೆ ಉದ್ಯಮಿಗಳು ಮಾರುಹೋಗಿದ್ದರು. ಬಣ್ಣದ ಮಾತಿಗೆ ಮರುಳಾಗಿ ಹಿಂದು-ಮುಂದು ನೋಡದೆ ಕೋಟ್ಯಂತರ ರೂ ಹಣ ನೀಡಿದ್ದಾರೆ.
ಮೊದಲ ಸುತ್ತಿನ ಮಾತುಕತೆ ಬಳಿಕ ಉದ್ಯಮಿಗಳಿಗೆ ತನ್ನ ವಂಚನೆ ಜಾಲದ ಖೆಡ್ಡಾಕ್ಕೆ ಬೀಳಿಸುತ್ತಿದ್ದ ರೋಹನ್, 50 ಕೋಟಿಯಿಂದ 100 ಕೋಟಿ ರೂ. ವ್ಯವಹಾರ ಅಥವಾ ಅದಕ್ಕಿಂತ ದೊಡ್ಡ ಮೊತ್ತದ ಸಾಲ ನೀಡಲು ಹಣಕ್ಕೆ ಬೇಡಿಕೆ ಇಡುತ್ತಿದ್ದ. ತಾನು ನಿರೀಕ್ಷೆ ಮಾಡಿದಷ್ಟು ಹಣ ವಸೂಲಿಯಾದ ಬಳಿಕ ಉದ್ಯಮಿಗಳಿಗೆ ನಾನಾ ನೆಪ ಹೇಳಿ ಎಸ್ಕೇಪ್ ಆಗುತ್ತಿದ್ದ. ಹೀಗೆ ಕೇವಲ 3 ತಿಂಗಳಲ್ಲೇ 45 ಕೋಟಿ ರೂ ವ್ಯವಹಾರ ನಡೆಸಿರುವುದು ಪತ್ತೆಯಾಗಿದೆ. ಸದ್ಯ ಉದ್ಯಮಿಯೊಬ್ಬರು ನೀಡಿದ ದೂರಿನ ಮೇಲೆ ಆತನನ್ನು ಬಂಧಿಸಲಾಗಿದೆ.
2016ರ ಬಳಿಕ ವಂಚನೆಯ ಜಾಲಕ್ಕೆ ಕೈ ರೋಹನ್ ಹಣದಾಸೆಯಿಂದ ವಂಚನೆಯ ಜಾಲವನ್ನು ವಿಸ್ತಾರ ಮಾಡಿಕೊಂಡಿದ್ದ. ಕಳೆದ ಮೂರು ತಿಂಗಳ ಅವಧಿಯಲ್ಲಿ40 ಕೋಟಿ ರೂ. ವ್ಯವಹಾರ ಮಾಡಿದ್ದ. ಕಳೆದ ತಿಂಗಳು 10 ಕೋಟಿ ರೂ. ಮೌಲ್ಯದ ಫಿಶಿಂಗ್ ಬೋಟ್ ತಯಾರು ಮಾಡಲು ಹೂಡಿಕೆ ಮಾಡಿದ್ದ.