ಕಾರ್ಕಳ: ಲೋಕಸಭಾ ಚುನಾವಣೆ ರಾಜ್ಯ ಕಾಂಗ್ರೆಸ್ ಸರ್ಕಾರದ ತಾತ್ಕಾಲಿಕ ಗ್ಯಾರಂಟಿಗಳ ಮೇಲೆ ನಡೆಯುವ ಚುನಾವಣೆಯಲ್ಲ. ಇದು ದೇಶದ ಸಮಗ್ರ ಅಭಿವೃದ್ದಿ ಹಾಗೂ ಸುರಕ್ಷಿತ ಭಾರತ ನಿರ್ಮಾಣಕ್ಕಾಗಿ ನಡೆಯುವ ಚುನಾವಣೆಯಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಹಾಗೂ ಉಡುಪಿ ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು
.
ಅವರು ಅಜೆಕಾರು ರಾಮ ಮಂದಿರದಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ಇಡೀ ಪ್ರಪಂಚವೇ ನರೇಂದ್ರ ಮೋದಿ ಮತ್ತೆ ಅಧಿಕಾರಕ್ಕೆ ಬರಬೇಕು ಎನ್ನುತ್ತಿದ್ದರೆ ರಾಜ್ಯದಲ್ಲಿ ಸಿದ್ದರಾಮಯ್ಯನವರು ಮಾತ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ,ವಿಧಾನ ಸೌಧದಲ್ಲಿ ಪಾಕಿಸ್ತಾನ ಜಿಂದಾಬಾದ್ ಅಂತ ಘೋಷಣೆ ಕೂಗಿದವರನ್ನು ಬಾಂಬ್ ಇಟ್ಟವರ ಪರವಾಗಿ ಸಮರ್ಥನೆ ಮಾಡಿದವರನ್ನು ಜನರು ಈ ಬಾರಿಯ ಚುನಾವಣೆಯಲ್ಲಿ ತಿರಸ್ಕರಿಸುತ್ತಾರೆ.
ರಾಜ್ಯದಲ್ಲಿ ಗ್ಯಾರಂಟಿಗಳನ್ನು ಸರಿಯಾಗಿ ಈಡೇರಿಸಲಾಗದೇ ಸರ್ಕಾರ ಒದ್ದಾಡುತ್ತಿದೆ.ಅಂಗನವಾಡಿ ಕಾರ್ಯಕರ್ತರಿಗೆ ವೇತನವಿಲ್ಲ, ಅಂಗವಿಕಲ ವೇತನ ಬಿಡುಗಡೆಯಾಗಿಲ್ಲ, ಒಂದೆಡೆ ಬರಗಾಲದಿಂದ ರಾಜ್ಯದಲ್ಲಿ ಮೇವಿನ ಕೊರತೆ, ಕುಡಿಯುವ ನೀರಿನ ಹಾಹಾಕಾರ ಶುರುವಾಗಿದೆ ಆದರೂ ಸರ್ಕಾರ ಮಾತ್ರ ಎಚ್ಚೆತ್ತಿಲ್ಲ ಎಂದು ಶ್ರೀನಿವಾಸ ಪೂಜಾರಿ ಆರೋಪಿಸಿದರು.
ಕಾರ್ಕಳ ಶಾಸಕ ಹಾಗೂ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಮಾತನಾಡಿ, ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿಯಾಗಬೇಕೆಂದು ದೇಶದ ಮತದಾರರ ಆಶಯವಾಗಿದೆ. ನರೇಂದ್ರ ಮೋದಿಯವರು ಕಳೆದ 10 ವರ್ಷಗಳಲ್ಲಿ ಒಂದೇಒಂದು ಕಪ್ಪುಚುಕ್ಕೆ ಇಲ್ಲದೇ ಜನಪರ ಆಡಳಿತ ನೀಡಿದ್ದಾರೆ.ಮೋದಿಯವರ ಸಮರ್ಥ ನಾಯಕತ್ವ ಹಾಗೂ ಭ್ರಷ್ಟಾಚಾರರಹಿತ ಆಡಳಿತದ ವೈಖರಿಗೆ ದೇಶಕ್ಕೆ ದೇಶವೇ ಮೆಚ್ಚುಗೆ ವ್ಯಕ್ತಪಡಿಸಿದೆ.ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ಬಳಿಕ ದೇಶದಲ್ಲಿ ಯಾವುದೇ ಭಯೋತ್ಪಾದಕ ಚಟುವಟಿಕೆಗಳು ನಡೆದಿಲ್ಲ, ಮೋದಿಯವರ ಆಡಳಿತದಲ್ಲಿ ಜನಸಾಮಾನ್ಯರು ನೆಮ್ಮದಿಯ ಜೀವನ ನಡೆಸುವಂತಾಗಿದೆ ಆದ್ದರಿಂದ ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಅಧಿಕಾರಕ್ಕೆ ತರುವಲ್ಲಿ ಕಾರ್ಯಕರ್ತರು ಶ್ರಮಿಸಬೇಕೆಂದರು
ಈ ಸಂದರ್ಭದಲ್ಲಿ ಬಿಜೆಪಿ ಹಿರಿಯ ಮುಖಂಡರಾದ ಮಣಿರಾಜ ಶೆಟ್ಟಿ, ಮಹಾವೀರ ಹೆಗ್ಡೆ, ಯುವಮೋರ್ಚಾ ರಾಜ್ಯ ಕಾರ್ಯದರ್ಶಿ ವಿಖ್ಯಾತ್ ಶೆಟ್ಟಿ, ಉಡುಪಿ ಜಿಲ್ಲಾ ಬಿಜೆಪಿ ವಕ್ತಾರ ಮುಟ್ಲುಪಾಡಿ ಸತೀಶ್ ಶೆಟ್ಟಿ, ಚುನಾವಣಾ ಪ್ರಭಾರಿ ಶ್ಯಾಮಲಾ ಕುಂದರ್ ಮುಂತಾದವರು ಉಪಸ್ಥಿತರಿದ್ದರು
ಬಿಜೆಪಿ ಉಪಾಧ್ಯಕ್ಷ ಹರೀಶ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು