ನವದೆಹಲಿ: ಲೋಕಸಭಾ ಮತ ಎಣಿಕೆಯ ದಿನದಿಂದ ಪ್ರಧಾನಿ ನರೇಂದ್ರ ಮೋದಿಗೆ ಸುದೀರ್ಘ ರಜೆ ಸಿಗಲಿದ್ದು ಇದು ಜನರು ಮೋದಿಗೆ ನೀಡುವ ಗ್ಯಾರಂಟಿಯಾಗಿದೆ ಎಂದು ಕೇಂದ್ರ ಮಾಜಿ ಸಚಿವ ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಹೇಳಿದ್ದಾರೆ.
ಕಾಂಗ್ರೆಸ್ ಪ್ರಣಾಳಿಕೆಯ ಮುಸ್ಲಿಂ ಲೀಗ್‌ನ ಛಾಯೆ ಕಾಣುತ್ತಿದೆ ಹಾಗೂ ಮೋದಿ ಗ್ಯಾರಂಟಿ ನೋಡಿ ಇಂಡಿಯಾ ಕೂಟಕ್ಕೆ ನಡುಕ ಶುರುವಾಗಿದೆ ಎಂಬ ಪ್ರಧಾನಿ ನರೇಂದ್ರ ಮೋದಿ ಟೀಕೆಗೆ ಪ್ರತಿಕ್ರಿಯಿಸಿರುವ ಜೈರಾಮ್ ರಮೇಶ್, ನಮ್ಮ ಗ್ಯಾರಂಟಿ ಯೋಜನೆ ನೋಡಿ ಮೋದಿ ತತ್ತರಿಸಿ ಹೋಗಿದ್ದಾರೆ. ಹೀಗಾಗಿಯೇ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ವಿರುದ್ಧ ಆಧಾರ ರಹಿತ ಹೇಳಿಕೆ ನೀಡುತ್ತಿದ್ದಾರೆ’ ಎಂದು ಹೇಳಿದೆ. ಅಲ್ಲದೆ ಜೂ.4ರ ಬಳಿಕ ಮೋದಿ ರಜೆಯ ಮೇಲೆ ತೆರಳುವುದು ಅನಿವಾರ್ಯ. ಇದು ದೇಶದ ಜನರ ಗ್ಯಾರಂಟಿ ಎಂದು ಕುಟುಕಿದ್ದಾರೆ. ದೇಶದ ಜನರು ಮೋದಿಯ ಹಸಿಸುಳ್ಳುಗಳಿಂದ ಬೇಸತ್ತು ಹೋಗಿದ್ದಾರೆ. ಕಳೆದ 10 ವರ್ಷಗಳಿಂದ ಬಿಜೆಪಿ ಸರ್ಕಾರದ ಅವಧಿಯಲ್ಲಿ ದೇಶದಲ್ಲಿ ಅಭಿವೃದ್ಧಿ ಶೂನ್ಯವಾಗಿದೆ ಅಲ್ಲದೇ ಅನ್ಯಾಯಕ್ಕೆ ಒಳಗಾಗಿದ್ದ ಜನರಲ್ಲಿ ಇದೀಗ ಕಾಂಗ್ರೆಸ್ ಘೋಷಿಸಿರುವ ಪಂಚ ನ್ಯಾಯ ಮತ್ತು ಪಚ್ಚೀಸ್ ಗ್ಯಾರಂಟಿ ಭರವಸೆ ಹೊಸ ಆಶಾಭಾವನೆ ಮೂಡಿಸಿದೆ. ಕಾಂಗ್ರೆಸ್‌ನ ಗ್ಯಾರಂಟಿ, ಈ ಹೊತ್ತಿನ ಜನರ ಅಗತ್ಯವನ್ನು ಪ್ರತಿನಿಧಿಸುತ್ತದೆ ಮತ್ತು ಸಂಕಷ್ಟದಲ್ಲಿರುವ ದೇಶದ ಜನರ ಧ್ವನಿಯಾಗಿದೆ ಎಂದು ಹೇಳಿದ್ದಾರೆ.