Share this news

ಕಾರ್ಕಳ: ರಾಜ್ಯ ಸರಕಾರ ನೀಡುತ್ತಿರುವ ಪಂಚ ಗ್ಯಾರಂಟಿ ಯೋಜನೆಗಳನ್ನು ಬೋಳ ಗ್ರಾಮದಲ್ಲಿ ಅನುಷ್ಟಾನಗೊಳಿಸಲು ಅವಕಾಶ ನೀಡುವುದಿಲ್ಲವೆಂದು ಗ್ರಾಮ ಸಭೆಯಲ್ಲಿ ಬೆದರಿಕೆ ಹಾಕಲಾಗಿದೆ ಎಂದು ಆರೋಪಿಸಿ ಗ್ರಾಮ ಪಂಚಾಯತ್ ಸದಸ್ಯರ ವಿರುದ್ದ ಕಾರ್ಕಳ ಕಾಂಗ್ರೆಸ್ ಪಕ್ಷದ ನೇತೃತ್ವದಲ್ಲಿ ಬೋಳ ಗ್ರಾಮ ಪಂಚಾಯತ್ ಮುಂಬಾಗ ಮಾಡಿರುವ ಪ್ರತಿಭಟನೆಯು ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರದ ಸರಣಿ ವೈಫಲ್ಯವನ್ನು ಮರೆಮಾಚಲು ಮಾಡಿರುವ ನಾಟಕವಾಗಿದೆ ಎಂದು ಬೋಳ ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಪೂಜಾರಿ ಹೇಳಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಆಡಳಿತಕ್ಕೆ ಬಂದ ನಂತರ ಯಾವುದೇ ಇಲಾಖೆಗಳಿಗೆ ಅನುದಾನ ಬರುತ್ತಿಲ್ಲ. ರಸ್ತೆಗಳು ಸಂಚಾರ ಮಾಡದಷ್ಟು ಹದಗೆಟ್ಟು ಹೋಗಿವೆ. ಕಳೆದ ವರ್ಷವೂ ಸರಕಾರ ರಸ್ತೆ ನಿರ್ವಹಣೆಗೆ ಅನುದಾನ ಬಿಡುಗಡೆಗೊಳಿಸಿಲ್ಲ ಇದರಿಂದ ಜನ ಹತಾಶೆಗೊಂಡಿದ್ದು ಪಂಚಾಯತ್ ಸದಸ್ಯರಾದ ನಮಗೆ ಜನಸಾಮನ್ಯರ ಪ್ರಶ್ನೆಗಳನ್ನು ಎದುರಿಸುವುದೇ ದೊಡ್ಡ ಸವಾಲಾಗಿದೆ. ಸರಕಾರ ಅನುದಾನ ನೀಡದೇ ಇರುವುದರಿಂದ ಪ್ರತೀ ಹಂತದಲ್ಲು ನನ್ನನ್ನು ಸೇರಿದಂತೆ ಎಲ್ಲಾ ಪಕ್ಷದ ಗ್ರಾಮ ಪಂಚಾಯತ್ ಸದಸ್ಯರನ್ನು ಗ್ರಾಮಸ್ಥರು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ. ಸರ್ಕಾರದ ವೈಫಲ್ಯದಿಂದಾಗಿ ಗ್ರಾಮ ಪಂಚಾಯತ್ ಸದಸ್ಯರುಗಳು ಪ್ರತಿದಿನ ಅವಮಾನ ಎದುರಿಸುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಮರೆಮಾಚಲು ಕಾರ್ಕಳ ಕಾಂಗ್ರೆಸ್ ನ ಒಂದು ತಂಡ ಪ್ರತಿಭಟನೆ ಮಾಡುವ ನೆಪದಲ್ಲಿ ಬೀದಿ ನಾಟಕ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಪ್ರತಿಭಟನೆಯಲ್ಲಿ ಬೋಳದ ಬೆರಳೆಣಿಕೆಯ ಕಾಂಗ್ರೆಸ್ ಕಾರ್ಯಕರ್ತರು ಮಾತ್ರ ಭಾಗವಹಿಸಿದ್ದು ಕಾರ್ಕಳದ ಬೇರೆ ಬೇರೆ ಭಾಗಗಳಿಂದ ತನ್ನ ಪಕ್ಷದ ಕಾರ್ಯಕರ್ತರನ್ನು ಕರೆತಂದು ಪ್ರತಿಭಟನೆ ಮಾಡುವ ದಾರಿದ್ರ‍್ಯ ಕಾಂಗ್ರೆಸ್ ಗೆ ಒದಗಿರುವುದು ದುರಂತವೇ ಸರಿ. ಈ ಪ್ರತಿಭಟನೆಗೆ ಸ್ಥಳೀಯರಿಂದ ಯಾವುದೇ ಸ್ಪಂದನೆ ದೊರಕದೇ ಇರುವುದನ್ನು ಕಂಡರೆ ಕಾಂಗ್ರೆಸ್ ಕಾರ್ಯಕರ್ತರೇ ರಾಜ್ಯ ಸರಕಾರದ ವಿರುದ್ದ ಬೇಸತ್ತಿದ್ದಾರೆ ಎಂದು ತಿಳಿಯುತ್ತದೆ. ನಮ್ಮ ಸದಸ್ಯರು ವೈಯುಕ್ತಿಕವಾಗಿ ಸರಕಾರದ ಗ್ಯಾರಂಟಿ ಬೇಡ ಎಂದು ತಿರಸ್ಕರಿಸಿ ಮಾತನಾಡಿದ್ದೇ ಹೊರತು, ಪಂಚಾಯತ್ ವ್ಯಾಪ್ತಿಯಲ್ಲಿ ಗ್ಯಾರಂಟಿ ಅನುಷ್ಠಾನಗೊಳಿಸಲು ಬಿಡುವುದಿಲ್ಲ ಎಂದು ಹೇಳಿರುವುದಿಲ್ಲ. ಆದರೆ ಇದನ್ನೆ ತಿರುಚಿ ತಮ್ಮ ಬೇಳೆ ಬೇಯಿಸುವುದಕ್ಕೋಸ್ಕರ ಸಾರ್ವಜನಿಕವಾಗಿ ಸುಳ್ಳು ಹೇಳಿಕೆ ನೀಡಿ ಗ್ರಾಮ ಪಂಚಾಯತ್ ಎದುರು ಮಾಡಿರುವ ಕಾಂಗ್ರೆಸ್ ನ ಈ ಪ್ರತಿಭಟನೆ ತೀರಾ ಬಾಲಿಶವಾಗಿದೆ.

ಕಾಂಗ್ರೆಸ್ ಆಡಳಿತಕ್ಕೆ ಬಂದನAತರ ಇದುವರೆಗೆ 9/11 ಸಮಸ್ಯೆಯನ್ನು ಬಗೆಹರಿಸಿಲ್ಲ. ಜನರು ಖಾತೆ ಪಡೆಯಲು ಪ್ರತಿನಿತ್ಯ ಅಲೆದಾಡುವ ಪರಿಸ್ಥಿತಿ ಇದೆ. ಕಟ್ಟಡ ಪರವಾನಿಗೆ ಸಿಗುತ್ತಿಲ್ಲ. ಮನೆ ಕಟ್ಟಲು ಕಟ್ಟಡ ಕಾಮಗಾರಿಗೆ ಕೆಂಪುಕಲ್ಲು, ಮರಳು ಸಿಗುತ್ತಿಲ್ಲ.ಇಂತಹ ನೂರಾರು ಸಮಸ್ಯೆಗಳನ್ನು ಮರೆಮಾಚುವ ಸಲುವಾಗಿ ಇಂತಹ ಕೃತಕ ವಿಷಯಗಳನ್ನು ಸೃಷ್ಠಿಸಿ ಪ್ರತಿಭಟನೆ ಮಾಡಿರುವುದು ಹಾಸ್ಯಾಸ್ಪದ. ಸಾದ್ಯವಾದರೆ ಇವೆಲ್ಲ ಸಮಸ್ಯೆಗಳನ್ನು ಪರಿಹರಿಸುವಂತೆ ಕಾಂಗ್ರೆಸ್ ತನ್ನ ಸರಕಾರದ ವಿರುದ್ದ ಪ್ರತಿಭಟನೆ ಮಾಡಿ ಜನಸಾಮಾನ್ಯರಿಗೆ ನ್ಯಾಯ ಒದಗಿಸಲಿ ಎಂದು ಈ ಮೂಲಕ ಸಲಹೆ ನೀಡಿದ್ದಾರೆ. ಇಂತಹ ಕ್ಷುಲಕ ಪ್ರತಿಭಟನೆಯನ್ನು ನಂಬುವುದಕ್ಕೆ ಬೋಳ ಗ್ರಾಮದ ಜನತೆ ಅನಕ್ಷರಸ್ಥರಲ್ಲ, ಪ್ರಬುದ್ದ, ಬುದ್ದಿವಂತ ಹಾಗೂ ಪ್ರಾಮಾಣಿಕರಾದ ಬೋಳ ಗ್ರಾಮದ ಜನತೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಗೆ ತಕ್ಕ ಉತ್ತರ ನೀಡಲಿದ್ದಾರೆ ಎಂದು ದಿನೇಶ್ ಪೂಜಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *