ಬೆಳ್ತಂಗಡಿ, ಆ 21:ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಆರೋಪದಲ್ಲಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಯನ್ನು ಪೊಲೀಸರು ಬಂಧಿಸಿದ್ದಾರೆ.
ಸೌಜನ್ಯ ಕೊಲೆ ಪ್ರಕರಣದ ವಿರುದ್ಧ ಹೋರಾಟ ನಡೆಸುತ್ತಿರುವ ಮಹೇಶ್ ಶೆಟ್ಟಿ ತಿಮರೋಡಿ ಬಿ.ಎಲ್ ಸಂತೋಷ್ ವಿರುದ್ಧ ಅತ್ಯಂತ ಕೀಳುಮಟ್ಟದ ಪದ ಬಳಸಿ ನಿಂದಿಸಿದ್ದಾರೆ ಎಂದು ಅವರ ವಿರುದ್ದ ಕಾನೂನುಕ್ರಮಕ್ಕೆ ಒತ್ತಾಯಿಸಿ ಉಡುಪಿ ಗ್ರಾಮಾಂತರ ಬಿಜಿಪಿಯ ಮಂಡ¯ಅಧ್ಯಕ್ಷ ರಾಜೀವ ಕುಲಾಲ್ ಬ್ರಹ್ಮಾವರ ಠಾಣೆಗೆ ದೂರು ನೀಡಿದ್ದರು. ಈ ದೂರಿನ ಹಿನ್ನಲ್ಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಮಹೇಶ್ ಶೆಟ್ಟಿಯವರಿಗೆ ಪೊಲೀಸರು ನೋಟೀಸ್ ನೀಡಿದ್ದರು. ಆದರೆ ಮಹೇಶ್ ತಿಮರೋಡಿ ವಿಚಾರಣೆಗೆ ಹಾಜರಾಗಿಲ್ಲ. ಈ ಹಿನ್ನೆಲೆಯಲ್ಲಿ ಗುರುವಾರ ಬೆಳಿಗ್ಗೆ ಮಹೇಶ್ ಶೆಟ್ಟಿ ತಿಮರೋಡಿ ಅವರ ಉಜಿರೆ ನಿವಾಸಕ್ಕೆ ಉಡುಪಿಯ ಎಸ್ ಪಿ ಸುಧಾಕರ್ ನಾಯಕ್ ನೇತೃತ್ವದ ತಂಡ ಆಗಮಿಸಿ ವಶಕ್ಕೆ ಪಡೆಯಲು ಯತ್ನಿಸಿತ್ತು. ಆದರೆ ಅವರ ವಕೀಲರು ಹಾಗೂ ಬೆಂಬಲಿಗರು ನಡುವೆ ಪೊಲೀಸರ ತೀವೃ ವಾಗ್ವಾದ ನಡೆಯಿತು. ಕೊನೆಗೂ ಪೊಲೀಸರು ಮನವೊಲಿಸಿ ಮಹೇಶ್ ಶೆಟ್ಟಿಯವರನ್ನು ವಶಕ್ಕೆ ಪಡೆದರು.
ನನ್ನ ಜೀವಕ್ಕೆ ಏನಾದರೂ ಆದರೆ ರಾಜ್ಯ ಸರ್ಕಾರ, ಬಿಜೆಪಿಯೇ ಕಾರಣ : ಮಹೇಶ್ ಶೆಟ್ಟಿ ತಿಮರೋಡಿ ಹೇಳಿಕೆ
ಪೊಲೀಸರು ಮಹೇಶ್ ಶೆಟ್ಟಿಯನ್ನು ಬಂಧಿಸಿದ ಬಳಿಕ ಹೇಳಿಕೆ ನೀಡಿದ ತಿಮರೋಡಿ, ನಾನು ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದು ನನ್ನ ಧ್ವನಿ ಅಡಗಿಸುವ ಯತ್ನ ನಡೆದಿದೆ. ನನ್ನ ಜೀವಕ್ಕೆ ಏನಾದರೂ ಆದರೆ ರಾಜ್ಯ ಸರ್ಕಾರ ಹಾಗೂ ಬಿಜೆಪಿಯೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.