ಕಾರ್ಕಳ: ಗಂಡನ ಮನೆಯವರ ಕಿರುಕುಳಕ್ಕೆ ಬೇಸತ್ತ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದ ಪ್ರಕರಣದಲ್ಲಿ ಪತ್ನಿಯ ಅಣ್ಣನೇ ತನ್ನ ಭಾವನಿಗೆ ತಲವಾರಿನಿಂದ ಕಡಿದ ಘಟನೆ ಕಾರ್ಕಳ ಬೈಪಾಸ್ ರಸ್ತೆಯ ಶಿವತಿಕೆರೆಯ ಬಳಿ ಸೋಮವಾರ ಮಧ್ಯಾಹ್ನ ನಡೆದಿದೆ. ಕಾರ್ಕಳ ಜೋಡುರಸ್ತೆಯ ನಿವಾಸಿ ಮೊಹಮ್ಮದ್ ರಿಜ್ವಾನ್ ಎಂಬವರ ಮೇಲೆ ಅಶ್ರಫ್ ಎಂಬಾತ ತಲವಾರಿನಿಂದ ಕಡಿದು ಹಲ್ಲೆ ನಡೆಸಿದ್ದು, ಗಂಭೀರವಾಗಿ ಗಾಯಗೊಂಡ ಮಹಮ್ಮದ್ ರಿಜ್ವಾನ್ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಹಮ್ಮದ್ ರಿಜ್ವಾನ್ ಕಾರ್ಕಳದ ತಾಲೂಕು ಕಚೇರಿ ಬಳಿ ಅರ್ಜಿ ಬರೆಯುವ ಕೆಲಸ ಮಾಡಿಕೊಂಡಿದ್ದು, ಇವರಿಗೆ ಕಳೆದ 2017ರಲ್ಲಿ ರೆಂಜಾಳದ ಮೈಮೂನಾ ಎಂಬಾಕೆಯ ಜತೆ ವಿವಾಹವಾಗಿತ್ತು. ಈ ನಡುವೆ ಪತಿ ಮಹಮ್ಮದ್ ರಿಜ್ವಾನ್ ಅವರ ಮನೆಯವರು ಸೊಸೆ ಮೈಮೂನಾಗೆ ವಿಪರೀತ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದ ಪರಿಣಾಮವಾಗಿ ಮೈಮೂನಾ ಇಲಿ ಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿ ಗಂಡನ ಮನೆಯವರ ವಿರುದ್ಧ ಮೃತ ಮೈಮೂನಾಳ ಅಕ್ಕ ರಶೀದಾ ಬಾನು ಕಾರ್ಕಳ ನಗರ ಪೊಲೀಸರಿಗೆ ದೂರು ನೀಡಿದ್ದರು.
ತಂಗಿ ಮೈಮೂನಾ ಗಂಡನ ಮನೆಯವರ ಕಿರುಕುಳಕ್ಕೆ ಮನನೊಂದು ಇಲಿಪಾಷಾಣ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಬಳಿಕ ಆಕೆಯ ಅಣ್ಣ ಅಶ್ರಫ್ ಹಾಗೂ ಆತನ ಭಾವ ಮಹಮ್ಮದ್ ರಿಜ್ವಾನ್ ಮತ್ತು ಮನೆಯವರ ನಡುವೆ ಜಗಳ ನಡೆದಿತ್ತು. ತನ್ನ ತಂಗಿಯ ಸಾವಿಗೆ ಕಾರಣನಾದ ಭಾವನ ವಿರುದ್ಧವೇ ಸೇಡು ತೀರಿಸಲು ಅಶ್ರಫ್ ಕಾಯುತ್ತಿದ್ದ. ಕೊನೆಗೂ ಸೋಮವಾರ ಮಧ್ಯಾಹ್ನ ಮಹಮ್ಮದ್ ರಿಜ್ವಾನ್ ಗೆ ಕಾರ್ಕಳದ ಶಿವತಿಕೆರೆಯ ಬಳಿ ಕರೆಸಿಕೊಂಡ ಅಶ್ರಫ್ ಕಾರಿನಿಂದ ಇಳಿದು ರಿಜ್ವಾನ್ ಮೇಲೆರಗಿದ್ದ. ಕತ್ತಿಯಿಂದ ರಿಜ್ವಾನ್ ತಲೆ ಹಾಗೂ ಕೈ ಗಳಿಗೆ ಕಡಿದು ಪರಾರಿಯಾಗಿದ್ದಾನೆ. ತಲವಾರು ದಾಳಿಯಿಂದ ಗಂಭೀರವಾಗಿ ಗಾಯಗೊಂಡ ರಿಜ್ವಾನ್ ಅವರನ್ನು ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಣಿಪಾಲದ ಕೆ.ಎಂ,ಸಿ ಆಸ್ಪತ್ರೆಗೆ ದಾಖಲಿಸಲಾಗಿದೆ.