ಮಂಗಳೂರು: ಮಂಗಳೂರು ಹೊರವಲಯದ ಕಲ್ಲಾಪು ನಿರ್ಜನ ಪ್ರದೇಶದಲ್ಲಿ ಅರೆಪ್ರಜ್ಞಾವಸ್ಥೆ ಸ್ಥಿತಿಯಲ್ಲಿ ಪತ್ತೆಯಾದ ಅಂತರರಾಜ್ಯ ಯುವತಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ 24 ಗಂಟೆಯೊಳಗೆ ಉಳ್ಳಾಲ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಮುಲ್ಕಿ ಮೂಲದ ಆಟೋ ಚಾಲಕ ಪ್ರಭುರಾಜ್(38), ಮಣಿ ಮತ್ತು ಕುಂಪಲದ ಮಿಥುನ್(30) ಬಂಧಿತ ಆರೋಪಿಗಳು.
ಮಂಗಳೂರಿನಲ್ಲಿ ಪರಿಚಯವಾದ ಆಟೋ ಚಾಲಕ ಮತ್ತು ಆತನ ಸ್ನೇಹಿತರು ಅತ್ಯಾಚಾರ ಮಾಡಿದ್ದಾರೆ ಎಂದು ಯುವತಿ ಪೊಲೀಸರ ಮುಂದೆ ಹೇಳಿದ್ದಾರೆ. ಆದರೆ, ವೈದ್ಯಕೀಯ ವರದಿ ಬಂದ ಬಳಿಕ ಯುವತಿ ಮೇಲೆ ಅತ್ಯಾಚಾರ ಎಸಗಲಾಗಿದೆಯೋ ಅಥವಾ ಇಲ್ಲವೋ ಎಂಬುವುದು ತಿಳಿಯಲಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರಕರಣದ ಸಂಬAಧ ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಮಾಹಿತಿ ನೀಡಿದ್ದು, ಬುಧವಾರ (ಏ.16) ರಾತ್ರಿ ಉಳ್ಳಾಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ. ಮಧ್ಯರಾತ್ರಿ 1.30ರ ಸುಮಾರಿಗೆ 112ಗೆ ಯುವತಿಯೊಬ್ಬಳು ಕೂಗಾಡುತ್ತಿದ್ದಾಳೆ, ಆಕೆಗೆ ಹಲ್ಲೆ ಮಾಡಿದ್ದಾರೆ ಎಂದು ಕರೆ ಬಂದಿತ್ತು. ತಕ್ಷಣ ನಮ್ಮ ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಯುವತಿಯನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಯುವತಿ ಮಾತನಾಡುವ ಸ್ಥಿತಿಯಲ್ಲಿರದ ಕಾರಣ ಆಸ್ಪತ್ರೆಗೆ ದಾಖಲಿಸಲಾಗಿದೆ. ಯುವತಿಯ ಹೇಳಿಕೆ ಪ್ರಕಾರ ಬುಧವಾರ ರಾತ್ರಿ ಯಾರೋ ಅವರಿಗೆ ಮದ್ಯಪಾನ ಮಾಡಿಸಿದ್ದಾರೆ. ಕಾರಿನಲ್ಲಿ ಮೂವರು ಇದ್ದಿದ್ದಾಗಿ ಯುವತಿ ಹೇಳಿಕೆ ನೀಡಿದ್ದಾರೆ. ಯುವತಿಗೆ ಪ್ರಜ್ಞೆ ಬಂದ ಬಳಿಕ ಒಳ ಉಡುಪು ಇರಲಿಲ್ಲ ಅಂತ ಹೇಳಿದ್ದಾರೆ ಎಂದು ತಿಳಿಸಿದರು.
ಯುವತಿ ಪಶ್ಚಿಮ ಬಂಗಾಳದ ಕುಚ್ ಬಿಹಾರ್ ಮೂಲದವರು. ಕೇರಳದ ಫ್ಲೈವುಡ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದರು. ಮಂಗಳೂರಿನಲ್ಲಿ ಬೇರೆ ಸಂಸ್ಥೆಯಲ್ಲಿ ಕೆಲಸದ ಅವಕಾಶವಿದ್ದ ಕಾರಣ, ತನ್ನ ಗೆಳೆಯನ ಜೊತೆ ಬುಧವಾರ ಮಂಗಳೂರಿಗೆ ಬಂದಿದ್ದಾರೆ. ಈ ವೇಳೆ, ಯುವತಿ ಮತ್ತು ಆಕೆಯ ಸ್ನೇಹಿತನ ನಡುವೆ ಜಗಳವಾಗಿದೆ. ಆಗ, ಸ್ನೇಹಿತ ಯುವತಿ ಮೊಬೈಲ್‌ಗೆ ಹಾನಿ ಮಾಡಿದ್ದಾನೆ. ನಂತರ, ಮೊಬೈಲ್ ರಿಪೇರಿಗೆಂದು ಆಟೋದಲ್ಲಿ ಅಂಗಡಿಗೆ ತೆರಳಿದ್ದಾರೆ. 5-6 ಗಂಟೆಗಳ ಕಾಲ ಯುವತಿ ಆಟೋ ಡ್ರೈವರ್ ಜೊತೆಗೆ ಇದ್ದರು. ಈ ವೇಳೆ, ಸ್ನೇಹ ಬೆಳೆದು ಆಟೋ ಚಾಲಕ ಯುವತಿಯ ಮೊಬೈಲ್ ರಿಪೇರಿಗೂ ಹಣ ಪಾವತಿಸಿದ್ದಾನೆ. ಪಶ್ಚಿಮ ಬಂಗಾಳಕ್ಕೆ ಹೋಗಲು ರೈಲ್ವೆ ನಿಲ್ದಾಣಕ್ಕೆ ಬಿಡಲು ಆಟೋ ಚಾಲಕನಿಗೆ ಯುವತಿ ಹೇಳಿದ್ದಾರೆ ಎಂದು ತಿಳಿಸಿದ್ದಾರೆ.
ಆದರೆ ಆಟೋ ಚಾಲಕ ಕಂಕನಾಡಿ ರೈಲ್ವೆ ನಿಲ್ದಾಣಕ್ಕೆ ಹೋಗದೇ, ಮತ್ತಿಬ್ಬರ ಗೆಳೆಯರನ್ನು ಕರೆಸಿ ಬೇರೊಂದು ಜಾಗಕ್ಕೆ ಯುವತಿಯನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ, ಯುವತಿಗೆ ಚೆನ್ನಾಗಿ ಮದ್ಯಪಾನ ಮಾಡಿಸಿದ್ದಾರೆ, ಆಕೆಯ ಪ್ರಜ್ಞೆ ತಪ್ಪಿದೆ. ಪ್ರಜ್ಞೆ ಬಂದಾಗ ಅತ್ಯಾಚಾರ ನಡೆದಿರುವುದು ಯುವತಿಯ ಗಮನಕ್ಕೆ ಬಂದಿದೆ. ಯುವತಿ ತನ್ನ ಹೇಳಿಕೆಯಲ್ಲಿ ಅತ್ಯಾಚಾರ ಆಗಿರುವುದಾಗಿ ಹೇಳಿದ್ದಾರೆ. ವೈದ್ಯಕೀಯ ವರದಿ ಬಂದ ಬಳಿಕ ಇದನ್ನು ದೃಢಪಡಿಸಲಾಗುವುದು ಎಂದು ಮಂಗಳೂರು ಪೊಲೀಸ್ ಆಯುಕ್ತ ಅನುಪಮ್ ಅಗರ್ವಾಲ್ ಹೇಳಿದ್ದಾರೆ.