ಮಂಗಳೂರು: ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ರೋಷನ್ ಸಲ್ಡಾನಾ ನನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಹಲವು ಆತಂಕಕಾರಿ ಸಂಗತಿಗಳು ಬಯಲಾಗುತ್ತಿವೆ. ದಿನಕ್ಕೊಂದು ಆತನ ನೌಟಂಕಿ ಆಟಗಳು ಹೊರ ಬರುತ್ತಿದ್ದು, ರೋಷನ್ ಸಲ್ಡಾನಾ ಹೆಣೆದಿರುವ ವಂಚನೆಯ ಮಾಯಾಜಾಲ ಕಂಡು ಮಂಗಳೂರು ಪೊಲೀಸರೇ ದಂಗಾಗಿದ್ದಾರೆ.
ವಂಚನೆಯ ಹಣದಲ್ಲಿ ಐಷಾರಾಮಿ ಜೀವನ ನಡೆಸುತ್ತಿದ್ದ ಆರೋಪಿ ರೋಷನ್ ಸಲ್ಡಾನಾ 2.75 ಕೋಟಿ ರೂಪಾಯಿ ಮೌಲ್ಯದ ವಜ್ರದ ಉಂಗುರ ಹಾಕುತ್ತಿದ್ದ. ಸದ್ಯ ಪೊಲೀಸರು ಈ ಉಂಗುರವನ್ನು ವಶಕ್ಕೆ ಪಡೆದಿದ್ದಾರೆ.
ಮಹಾರಾಷ್ಟ್ರದ ಓರ್ವ ಉದ್ಯಮಿಗೆ 5 ಕೋಟಿ ರೂ., ಮತ್ತೊಬ್ಬ ಉದ್ಯಮಿಗೆ 10 ಕೋಟಿ ರೂ. ಮತ್ತು ಅಸ್ಸಾಂನ ಓರ್ವ ಉದ್ಯಮಿಯಿಂದ 20 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾನೆ. ಈ ಎಲ್ಲ ಉದ್ಯಮಿಗಳು ಇದೀಗ ಮಂಗಳೂರಿನ ಸಿಇಎನ್ ಪೊಲೀಸ್ ಠಾಣೆಗೆ ಆಗಮಿಸಿ, ದೂರು ನೀಡುತ್ತಿದ್ದಾರೆ. ಪೊಲೀಸರು ಬ್ಯಾಂಕ್ಗಳಿಗೆ ಸಂಪರ್ಕಿಸಿ ಮಹಾರಾಷ್ಟ್ರದ ಉದ್ಯಮಿಗೆ ಸಂಬಂಧಿಸಿದ ರೂ 3.5 ಕೋಟಿ ಹಣ ಹಾಗೂ ಅಸ್ಸಾಂ ರಾಜ್ಯದ ಓರ್ವ ವ್ಯಕ್ತಿಗೆ ಸಂಬಂಧಿಸಿದ 20 ಲಕ್ಷ ರೂ. ಹಣವನ್ನು ಪ್ರೀಜ್ ಮಾಡಿಸಿದ್ದಾರೆ.
ರೋಹನ್ ಐಷಾರಾಮಿ ವ್ಯಕ್ತಿಗಳು, ಉದ್ಯಮಿಗಳನ್ನು ಟಾರ್ಗೆಟ್ ಮಾಡಿ ಗಾಳ ಹಾಕುತ್ತಿದ್ದ. ಭೂ ವ್ಯವಹಾರ, ಸಾಲ ನೀಡುವ ನೆಪದಲ್ಲಿ ನಂಬಿಸಿ, ಮಂಗಳೂರಿನ ಜಪ್ಪಿನಮೊಗರುವಿನ ಐಷಾರಾಮಿ ಬಂಗಲೆಗೆ ಕರೆದು ವ್ಯವಹಾರ ಕುದುರಿಸುತ್ತಿದ್ದ. ರೋಹನ್, ಕೈಸ್ತ ಸಮುದಾಯದವನಾದರೂ ಹಿಂದೂ ಗುರೂಜಿ ಫೋಟೋವನ್ನು ತನ್ನ ಮನೆಯಲ್ಲಿ ಹಾಕಿ ಅದನ್ನೂ ತನ್ನ ಕಾರ್ಯ ಸಾಧನೆಗೆ ಬಳಸಿಕೊಂಡಿದ್ದ ಎನ್ನುವ ಮಾಹಿತಿ ಲಭಿಸಿದೆ.
