ಮಂಗಳೂರು: ಮಂಗಳೂರಿನ ಕಾರ್ಮಿಕ ರಾಜ್ಯ ವಿಮಾ (ಇಎಸ್‌ಐ) ಆಸ್ಪತ್ರೆಯ ಸುಧಾರಣೆಗೆ ರಾಜ್ಯ ಸರಕಾರ ಶೀಘ್ರ “ರಾಜ್ಯ ಇಎಸ್‌ಐ ಸೊಸೈಟಿ’ ರಚಿಸಬೇಕೆಂದು ಸಂಸದ ಕ್ಯಾ| ಬ್ರಿಜೇಶ್ ಚೌಟ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಆಗ್ರಹಿಸಿದ್ದಾರೆ.
ಈ ಬಗ್ಗೆ ಸಚಿವರಿಗೆ ಪತ್ರ ಬರೆದಿರುವ ಅವರು, ರಾಜ್ಯ ಇಎಸ್‌ಐ ಸೊಸೈಟಿ ರಚನೆಯಿಂದ ಇಎಸ್‌ಐ ಆಸ್ಪತ್ರೆಗಳಲ್ಲಿ ಮೂಲಸೌಕರ್ಯದ ತ್ವರಿತ ಸುಧಾರಣೆ, ವೈದ್ಯಕೀಯ ಉಪಕರಣಗಳ ಖರೀದಿ, ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಅನುಕೂಲವಾಗುವುದು ಮಾತ್ರವಲ್ಲದೆ, ಅನುಭವಿ ತಜ್ಞ ವೈದ್ಯರು ಮತ್ತು ನುರಿತ ಸಿಬಂದಿಯನ್ನು ನೇಮಕ ಮಾಡಲು ಇದು ಸಹಾಯವಾಗಲಿದೆ ಎಂದಿದ್ದಾರೆ.
ಕ್ಯಾ| ಚೌಟರು ಮಂಗಳೂರು ಇಎಸ್‌ಐ ಆಸ್ಪತ್ರೆಯ ಸಮಸ್ಯೆಗಳ ಕುರಿತು ಚರ್ಚಿಸಲು ಇತ್ತೀಚೆಗೆ ದಿಲ್ಲಿಯಲ್ಲಿ ನೌಕರರ ರಾಜ್ಯ ವಿಮಾ ನಿಗಮದ ಮಹಾನಿರ್ದೇಶಕ ಅಶೋಕ್ ಕುಮಾರ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ರಾಜ್ಯ ಸರಕಾರವು ಪ್ರತ್ಯೇಕ ಸೊಸೈಟಿ ರಚಿಸಬೇಕು. ಅದು ರಾಜ್ಯದ ಎಲ್ಲ ಇಎಸ್‌ಐಸಿಗೆ ಸಂಬಂಧಿಸಿದ ವಿಷಯಗಳಿಗೆ ಮತ್ತು ಕೇಂದ್ರದ ಫಂಡ್ ವಿತರಣೆಗೆ ಆಡಳಿತ ಮಂಡಳಿಯಾಗಿದ್ದು, ಕರ್ನಾಟಕ ಸರಕಾರದ ಮುಖ್ಯ ಕಾರ್ಯದರ್ಶಿ ಮತ್ತು ಕಾರ್ಮಿಕ ಕಾರ್ಯದರ್ಶಿಗಳು ಈ ಸೊಸೈಟಿಯ ಮುಖ್ಯಸ್ಥರಾಗಿರುತ್ತಾರೆ ಎಂದು ಡಿಜಿ ತಿಳಿಸಿದ್ದರು. ಈ ಹಿನ್ನೆಲೆಯಲ್ಲಿ ಶೀಘ್ರವಾಗಿ “ರಾಜ್ಯ ಇಎಸ್‌ಐ ಸೊಸೈಟಿ’ ರಚನೆ ಸಂಬಂಧ ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕೆಂದು ಸಂಸದರು ಕಾರ್ಮಿಕ ಸಚಿವರನ್ನು ಆಗ್ರಹಿಸಿದ್ದಾರೆ.