ಮಂಗಳೂರು : ನಿಷೇಧಿತ ಮಾದಕ ವಸ್ತುವಾದ ಎಂಡಿಎಂಎ ಸಾಗಾಟ, ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ಮಂಗಳೂರು ಸಿಸಿಬಿ ಪೊಲೀಸರು ಆರೋಪಿಗಳಿಂದ 23 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ಕಲಬುರಗಿ ಜಿಲ್ಲೆಯ ಉಮ್ಮರ್ ಕಾಲೊನಿಯ ದರ್ಗಾ ಸಮೀಪದ ನಿವಾಸಿ ಶೇಖ್ ಸಿಕಂದರ್ (22) ಹಾಗೂ ಕಾವೂರು ಗಾಂಧಿನಗರದ ನಿವಾಸಿ ಮೊಹಮ್ಮದ್ ತೌಫೀಕ್ (29) ಎಂದು ಗುರುತಿಸಲಾಗಿದೆ.
ಕೂಳೂರು ಪರಿಸರದಲ್ಲಿ ಮಾದಕ ಪದಾರ್ಥ ಮಾರಾಟ ಮಾಡುತ್ತಿರುವ ಮಾಹಿತಿ ಇತ್ತು. ಸ್ಥಳಕ್ಕೆ ದಾಳಿ ನಡೆಸಿದಾಗ ಆರೋಪಿ ತೌಫೀಕ್ ಸ್ಕೂಟರ್‌ನಲ್ಲಿ ಮಾದಕ ಪದಾರ್ಥವನ್ನು ಇಟ್ಟುಕೊಂಡು ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದುದು ಕಂಡು ಬಂತು. ಆತನ ಬಳಿ 23 ಗ್ರಾಂಗಳಷ್ಟು ಎಂಡಿಎಂಎ ಪತ್ತೆಯಾಗಿತ್ತು. ಕೃತ್ಯಕ್ಕೆ ಬಳಸಿದ ಸ್ಕೂಟರ್, ಎರಡು ಮೊಬೈಲ್‌ಗಳನ್ನು ಆರೋಪಿಯಿಂದ ವಶಪಡಿಸಿಕೊಳ್ಳಲಾಗಿದೆ. ಈ ಎಲ್ಲ ಸ್ವತ್ತುಗಳ ಮೌಲ್ಯ ₹ 2.10 ಲಕ್ಷ ಎಂದು ಅಂದಾಜಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

