ಮಂಗಳೂರು: ಮರವೂರು ಫಲ್ಗುಣಿ ನದಿಯಲ್ಲಿ ಈಜಲು ತೆರಳಿದ ನಾಲ್ವರು ಯುವಕರ ಪೈಕಿ ಇಬ್ಬರು ಯುವಕರು ನೀರುಪಾಲಾದ ಘಟನೆ ರವಿವಾರ ಸಂಜೆ ಸಂಭವಿಸಿದೆ.
ಮಂಗಳೂರು ಕೊಟ್ಟಾರಚೌಕಿ ನಿವಾಸಿ ಸುಮಿತ್ (20) ಹಾಗೂ ಉರ್ವಸ್ಟೋರ್ ನಿವಾಸಿ ಅನೀಶ್ (19) ನೀರಿನ ಸುಳಿಗೆ ಸಿಲುಕಿ ನಾಪತ್ತೆಯಾದ ಯುವಕರು.
ಮರವೂರು ವೆಂಟೆಡ್ ಡ್ಯಾಂನ ಪಕ್ಕದಲ್ಲಿರುವ ರೈಲ್ವೆ ಸೇತುವೆಯ ಬಳಿಯ ಫಲ್ಗುಣಿ ನದಿಯಲ್ಲಿ ಈಜಲು ನಾಲ್ವರು ಯುವಕರ ತಂಡ ರವಿವಾರ ಸಂಜೆ 4ಗಂಟೆಗೆ ಹೋಗಿದ್ದರು.
ಕೋಡಿಕಲ್‌ನ ನಿವಾಸಿಗಳಾದ ಅರುಣ್ (19), ದೀಕ್ಷಿತ್ (20), ಕೊಟ್ಟಾರ ಚೌಕಿಯ ಸುಮಿತ್ (20) ಹಾಗೂ ಉರ್ವಸ್ಟೋರಿನ ಅನಿಶ್ (19) ಅವರು ಮಳವೂರು ರೈಲ್ವೇ ಸೇತುವೆಯ ಬಳಿ ಫಲ್ಗುಣಿ ನದಿಯಲ್ಲಿ ಈಜಾಡಲು ತೆರಳಿದ್ದರು. ಈ ನಾಲ್ವರ ಪೈಕಿ ಸುಮಿತ್ ಹಾಗೂ ಅನಿಶ್ ನದಿ ನೀರಿನ ಸುಳಿಗೆ ಸಿಲುಕಿ ನೀರುಪಾಲಾಗಿದ್ದಾರೆ.
ಅರುಣ್(19) ಹಾಗೂ ದೀಕ್ಷತ್(18) ಪಾರಾಗಿದ್ದಾರೆ. ಸುಮಿತ್ ಕೊಟ್ಟಾರ ಚೌಕಿಯಲ್ಲಿನ ಗ್ಯಾರೇಜ್ ವೊಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದರು. ಇನ್ನು ಅನಿಶ್ ಸೋಡಾ ಫಾಕ್ಟರಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆಯ ಮಾಹಿತಿ ತಿಳಿದ ಬಜಪೆ ಪೊಲೀಸರು ಮತ್ತು ಅಗ್ನಿಶಾಮಕ ದಳದವರು ಸ್ಥಳಕ್ಕೆ ಭೇಟಿ ನೀಡಿ, ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ಆರಂಭಿಸಿದ್ದರು. ಅಗ್ನಿಶಾಮಕ ದಳದವರು ಬೆಳಕಿನ ವ್ಯವಸ್ಥೆಯೊಂದಿಗೆ ತಡರಾತ್ರಿಯವರೆಗೂ ಶೋಧ ಕಾರ್ಯ ನಡೆಸಿದ್ದು, ಸ್ಥಳಕ್ಕೆ ಮುಳುಗು ತಜ್ಞರು ಕೂಡ ಆಗಮಿಸಿದ್ದರು.
ಬಜಪೆ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಸಂದೀಪ್ ಜಿ.ಎಸ್. ಮತ್ತು ಸಿಬ್ಬಂದಿ ಸ್ಥಳದಲ್ಲಿಯೇ ಮೊಕ್ಕಾಂ ಹೂಡಿದ್ದರು. ಅಗ್ನಿಶಾಮಕ ದಳ ಹಾಗೂ ಮುಳುಗು ತಜ್ಞರು ಆಗಮಿಸಿ, ಜಂಟಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಬಜಪೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿದ್ದಾರೆ.
in