ಮಂಗಳೂರು: ಮಂಗಳೂರು ಜಿಲ್ಲಾ ಕಾರಾಗೃಹದಲ್ಲಿ ಸಹ ಕೈದಿಗೆ ಹಲ್ಲೆ ನಡೆಸಿ ಹಣಕ್ಕಾಗಿ ಬೇಡಿಕೆಯಿಟ್ಟು ಇಪ್ಪತ್ತು ಸಾವಿರ ರೂಪಾಯಿ ಹಫ್ತಾ ವಸೂಲಿ ಮಾಡಿದ ನಾಲ್ವರು ಆರೋಪಿಗಳ ವಿರುದ್ದ ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಜೈಲು ಒಳಗಡೆಯೆ ನಡೆದ ಹಫ್ತಾ ವಸೂಲಿ ಪ್ರಕ್ರಿಯೆಯನ್ನು ಗಂಭೀರವಾಗಿ ಪರಿಗಣಿಸಿದ ಕಮಿಷನರ್ ಸುಧೀರ್ ಕುಮಾರ್, ಆರೋಪಿತ ನಾಲ್ವರು ಕೈದಿಗಳಾದ ಧನು ಯಾನೆ ಧನುಷ್ ಭಂಡಾರಿ, ಸಚಿನ್ ತಲಪಾಡಿ, ದಿಲೇಶ್ ಬಂಗೇರ ಯಾನೆ ದಿಲ್ಲು, ಲಾಯಿ ವೇಗಸ್ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.
ಸಂಘಟಿತ ಅಪರಾಧ ಮತ್ತು ಭಯೋತ್ಪಾದನೆಯನ್ನು ಎದುರಿಸಲು ಕರ್ನಾಟಕ ರಾಜ್ಯ ಸರ್ಕಾರ ಕೋಕಾ ಕಾಯ್ದೆ ಜಾರಿಗೆ ತಂದಿದೆ. ಕರ್ನಾಟಕ ಸಂಘಟಿತ ಅಪರಾಧಗಳ ನಿಯಂತ್ರಣ ಕಾಯ್ದೆ ಅಥವಾ ಕೆ-ಕೋಕಾ ಕಾಯ್ದೆ 2000ನೇ ಇಸವಿಯಲ್ಲಿ ಅಸ್ತಿತ್ವಕ್ಕೆ ಬಂದಿದೆ. ಎರಡು ಪ್ರಕರಣಗಳಲ್ಲಿ ಶಾಮೀಲಾದ ಆರೋಪಿಗಳು ಮತ್ತೆ ಅಪರಾಧ ಕೃತ್ಯಗಳನ್ನು ಎಸಗಿದರೆ ಅವರ ವಿರುದ್ದ ಕೆ-ಕೋಕಾ ಕಾಯ್ದೆಯಡಿ ಪ್ರಕರಣ ದಾಖಲು ಮಾಡುವ ಅವಕಾಶ ಕಾನೂನಿನಲ್ಲಿದೆ.
ಕೆ-ಕೋಕಾ ಕಾಯ್ದೆಯಡಿ ಕನಿಷ್ಠ ಐದು ವರ್ಷ ಶಿಕ್ಷೆ ವಿಧಿಸಲು ಅವಕಾಶವಿದ್ದು, ಗರಿಷ್ಠ ಜೀವಾವಧಿ ಶಿಕ್ಷೆವರೆಗೂ ವಿಸ್ತರಿಸಬಹುದಾಗಿದೆ. ಈ ಕ್ರಿಮಿನಲ್ ಗ್ಯಾಂಗ್ ಸದಸ್ಯರಾಗಿದ್ದವರ ಮೇಲೂ ಕನಿಷ್ಠ ಐದು ವರ್ಷ ಶಿಕ್ಷೆ ವಿಧಿಸಬಹುದಾಗಿದೆ. ಹೀಗಾಗಿ ಯಾರು ಸಹ ಪ್ರಕರಣದಲ್ಲಿ ಶಾಮೀಲಾದವರ ಜೊತೆ ತಿರುಗಾಡಬೇಡಿ ಎಂದು ಪೊಲೀಸ್ ಕಮೀಷನರ್ ಎಚ್ಚರಿಕೆ ನೀಡಿದ್ದಾರೆ.
ಈ ಕಾಯ್ದೆಯಲ್ಲಿ ಕಡ್ಡಾಯವಾಗಿ ಡಿಎಸ್‌ಪಿ ಶ್ರೇಣಿಯ ಅಧಿಕಾರಿ ಪ್ರಕರಣದ ತನಿಖೆ ನಡೆಸಬೇಕು ಎಂಬ ನಿಯಮವಿದ್ದು, ಸದ್ಯ ಈ ನಾಲ್ವರು ಆರೋಪಿಗಳ ವಿರುದ್ದ ದಾಖಲಾಗಿರುವ ಪ್ರಕರಣಕ್ಕೆ ತನಿಖಾಧಿಕಾರಿಯಾಗಿ ಉತ್ತರ ವಿಭಾಗದ ಎಸಿಪಿ ಶ್ರೀಕಾಂತ್ ರನ್ನು ನೇಮಿಸಲಾಗಿದೆ.