ಜಮ್ಮು ಕಾಶ್ಮೀರ: ಜಮ್ಮು ಕಾಶ್ಮೀರದ ಕುಲ್ಗಾಮ್ ನಲ್ಲಿ ಉಗ್ರರು ಮತ್ತೆ ಬಾಲಬಿಚ್ಚಿದ್ದು, ಭಾರತೀಯ ಸೇನೆ ಕೂಂಬಿಂಗ್ ಕಾರ್ಯಾಚರಣೆಯ ವೇಳೆ ಉಗ್ರರು ಭದ್ರತಾ ಪಡೆಯ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಭದ್ರತಾಪಡೆ ಹಾಗೂ ಭಯೋತ್ಪಾದಕರ ಮಧ್ಯೆ ಗುಂಡಿನ ಚಕಮಕಿ ನಡೆದಿದೆ. ಈ ಗುಂಡಿನ ಕಾಳಗದಲ್ಲಿ ಭಾರತೀಯ ಸೇನೆ ಒರ್ವ ಉಗ್ರನನ್ನು ಎನ್ಕೌಂಟರ್ ಮಾಡಿದೆ ಎನ್ನುವ ಮಾಹಿತಿ ಲಭಿಸಿದೆ.
ಕುಲ್ಗಾಮ್‌ನ ಗುಡ್ಡಾರ್ ಕಾಡಿನಲ್ಲಿ ಉಗ್ರರಿರುವ ಬಗ್ಗೆ ಭಾರತೀಯ ಸೇನೆ, ಸಿಆರ್‌ಪಿಎಫ್ ಮತ್ತು ಸ್ಥಳೀಯ ಪೊಲೀಸರ ಜಂಟಿ ತಂಡಕ್ಕೆ ನಿರ್ದಿಷ್ಟ ಮಾಹಿತಿ ದೊರೆತ ಹಿನ್ನೆಲೆ ಉಗ್ರರಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾಗ ಯೋಧರ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದಾರೆ.
ಪೊಲೀಸ್, ಸೇನೆ ಮತ್ತು ಸಿಆರ್‌ಪಿಎಫ್‌ನ ಎಸ್‌ಒಜಿ ಈ ಕಾರ್ಯಾಚರಣೆಯಲ್ಲಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಬರಬೇಕಿದೆ ಎಂದು ಕಾಶ್ಮೀರ ವಲಯ ಪೊಲೀಸರು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಭದ್ರತಾ ಪಡೆಗಳಿರುವ ಜಾಗದ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿದ ನಂತರ ಶೋಧ ಕಾರ್ಯಾಚರಣೆ ಎನ್‌ಕೌಂಟರ್ ಆಗಿ ಬದಲಾಯಿತು ಎಂದು ಭದ್ರತಾ ಪಡೆ ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಬಂದ ಮಾಹಿತಿಯ ಪ್ರಕಾರ ಈ ಎನ್‌ಕೌಂಟರ್‌ನಲ್ಲಿ ಭದ್ರತಾ ಪಡೆಗಳು ಓರ್ವ ಉಗ್ರನ ಹೆಡೆಮುರಿ ಕಟ್ಟಿದ್ದಾರೆ ಎಂದು ವರದಿಯಾಗಿದೆ. ಈ ಘಟನೆಯಲ್ಲಿ ಭಾರತೀಯ ಸೇನೆಯ ಜೂನಿಯರ್ ಕಮೀಷನ್ಡ್ ಅಧಿಕಾರಿಯೂ ಗಾಯಗೊಂಡಿದ್ದಾರೆ. ಕಾರ್ಯಾಚರಣೆ ಮುಂದುವರೆದಿದೆ ಎಂದು ಸೇನೆಯ ಚೀನಾರ್ ಕಾರ್ಪ್ ಮಾಹಿತಿ ನೀಡಿದೆ.