ಬೆಳಗಾವಿ, ಸೆಪ್ಟೆಂಬರ್ 26: ಸಹಕಾರ ಸಚಿವರಾಗಿದ್ದ ಕೆಎನ್ ರಾಜಣ್ಣರನ್ನು ಸಂಪುಟದಿAದ ಕೈಬಿಟ್ಟ ಬಳಿಕ ಮತ್ತೋರ್ವ ಹಿರಿಯ ಕಾಂಗ್ರೆಸ್ ಶಾಸಕರಿಗೆ ಕಾಂಗ್ರೆಸ್ ಹೈಕಮಾಂಡ್ ಶಾಕ್ ನೀಡಿದೆ. ಪಕ್ಷ ವಿರೋಧಿ ಹಾಗೂ ಸರ್ಕಾರಕ್ಕೆ ಮುಜುಗರ ಉಂಟು ಮಾಡುವಂಥ ಹೇಳಿಕೆ ನೀಡಿದ ಕಾಗವಾಡ ಶಾಸಕ ರಾಜು ಕಾಗೆ ಅವರನ್ನು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸಲಾಗಿದೆ. ರಾಜು ಕಾಗೆ ಬದಲಾಗಿ ಅರುಣ್ ಪಾಟೀಲ ಅವರನ್ನು ನೂತನ ಅಧ್ಯಕ್ಷರಾಗಿ ನೇಮಕ ಮಾಡುವಂತೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಅವರು ಸಿಎಂ ಸಿದ್ದರಾಮಯ್ಯಗೆ ಅಂತಿಮ ಪಟ್ಟಿಯನ್ನು ರವಾನಿಸಿದ್ದಾರೆ. ಈ ಮೂಲಕ ಸರ್ಕಾರಕ್ಕೆ ಮುಜುಗರ ಉಂಟುಮಾಡುವAಥ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಪ್ರಬಲ ಸಂದೇಶ ರವಾನಿಸಿದೆ.
ಕೆಲ ಸಮಯ ಹಿಂದೆ ಸರ್ಕಾರಕ್ಕೆ ಮುಜುಗರ ಉಂಟುಮಾಡುವಂತಹ ಹೇಳಿಕೆಯನ್ನು ರಾಜು ಕಾಗೆ ನೀಡಿದ್ದರು. ನನಗೆ ಸರ್ಕಾರದಿಂದ 25 ಕೋಟಿ ರೂ. ವಿಶೇಷ ಅನುದಾನ ಬಿಡುಗಡೆ ಆಗಿದೆ. 13 ಕೋಟಿ ರೂಪಾಯಿಯಲ್ಲಿ 72 ಸಮುದಾಯ ಭವನ, 12 ಕೋಟಿ ರೂಪಾಯಿಯಲ್ಲಿ ರಸ್ತೆ ನಿರ್ಮಾಣಕ್ಕೆ ಚಾಲನೆ ನೀಡಿದ್ದೆ. ಚಾಲನೆ ನೀಡಿ ಎರಡು ವರ್ಷ ಕಳೆದರೂ ಈವರೆಗೆ ಕಾಮಗಾರಿ ಆರಂಭವಾಗಿಲ್ಲ. ವರ್ಕ್ ಆರ್ಡರ್ ಕೊಡದಿರುವುದಕ್ಕೆ ನನಗೆ ನೋವಾಗಿದೆ ಎಂದು ಕಾಗೆ ಅಸಾಮಾಧಾನ ವ್ಯಕ್ತಪಡಿಸಿದ್ದರು.
ಕಾಗವಾಡ ಶಾಸಕ ರಾಜು ಕಾಗೆ ಜೂನ್ 23 ರಂದು ಬಹಿರಂಗವಾಗಿ ಹೇಳಿಕೆ ನೀಡಿದ್ದರು. ಇದರಿಂದ ರಾಜ್ಯ ಸರ್ಕಾರ ತೀವ್ರ ಮುಜುಗರಕ್ಕೆ ಒಳಗಾಗಿತ್ತು. ಆ ಬಳಿಕ ರಾಜು ಕಾಗೆ ಜೊತೆಗೆ ಪ್ರತ್ಯೇಕ ಸಭೆ ನಡೆಸಿ ರಾಜ್ಯ ಉಸ್ತುವಾರಿ ರಣದೀಪಸಿಂಗ್ ಸುರ್ಜೆವಾಲ ಮನವೊಲಿಸಿದ್ದರು. ಬಹಿರಂಗ ಹೇಳಿಕೆ ನೀಡದಂತೆಯೂ ಕಟ್ಟುನಿಟ್ಟಿನ ಸೂಚನೆ ನೀಡಿದ್ದರು.