ಬೆಂಗಳೂರು,, ಸೆಪ್ಟೆಂಬರ್ 26: ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರು ಯಾರು ಎಂಬ ಪ್ರಶ್ನೆ ಸ್ವತಃ ಹಾಲಿ ಅಧ್ಯಕ್ಷ ರಾಜು ಕಾಗೆ ಅವರನ್ನೇ ಕಾಡತೊಡಗಿದೆ. ಆದ್ದರಿಂದ ಎಐಸಿಸಿ ಕಳಿಸಿರುವ ಪಟ್ಟಿಯಲ್ಲಿ ಅರುಣ್ ಪಾಟೀಲ್ ಹೆಸರು ಉಲ್ಲೇಖ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಅವರನ್ನು ಭೇಟಿಯಾಗಿ ಕಾಗವಾಡ ಕ್ಷೇತ್ರದ ಕಾಂಗ್ರೆಸ್ ಶಾಸಕ ರಾಜು ಕಾಗೆ ಗೊಂದಲದ ಬಗ್ಗೆ ಚರ್ಚಿಸಿದ್ದಾರೆ. ಈ ವೇಳೆ ಸಿಎಂ ಸಿದ್ದರಾಮಯ್ಯ ಪ್ರಿಂಟ್ ಮಿಸ್ಟೆಕ್ ಆಗಿದೆ. ಅದನ್ನು ಹೊರತುಪಡಿಸಿ ಯಾವುದೇ ಸಮಸ್ಯೆ ಇಲ್ಲ. ನಿಮ್ಮನ್ನೇ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಸೋದಾಗಿ ತಿಳಿಸಿದ್ದಾರೆ ಎನ್ನಲಾಗಿದೆ.
ಸರ್ಕಾರಕ್ಕೆ ಮುಜುಗರ ಆಗುವಂತೆ ಹೇಳಿಕೆ ನೀಡಿದ್ದ ಕಾರಣ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ಸ್ಥಾನದಿಂದ ಶಾಸಕ ರಾಜು ಕಾಗೆ ಅವರನ್ನು ವಜಾ ಮಾಡಲಾಗಿದೆ. ತೆರವಾದ ಹುದ್ದೆಗೆ ಅರುಣ್ ಪಾಟೀಲ್ ನೇಮಕಕ್ಕೆ ಹೈಕಮಾಂಡ್ ನಿರ್ಧರಿಸಿದ್ದು, ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲರಿಂದ ಈ ಬಗ್ಗೆ ಪಟ್ಟಿ ಸಿಎಂ ಸಿದ್ದರಾಮಯ್ಯ ಅವರಿಗೆ ರವಾನೆಯಾಗಿದೆ. ಈ ಮೂಲಕ ಸರ್ಕಾರಕ್ಕೆ ಮುಜುಗರ ಉಂಟುಮಾಡುವAಥ ಹೇಳಿಕೆಗಳನ್ನು ನೀಡುವವರ ವಿರುದ್ಧ ಕಾಂಗ್ರೆಸ್ ಹೈಕಮಾಂಡ್ ಪ್ರಬಲ ಸಂದೇಶ ರವಾನಿಸಿರುವ ಬಗ್ಗೆ ಸುದ್ದಿ ಹರಿದಾಡಿತ್ತು. CWC ಸಭೆಗೆಂದು ಕರ್ನಾಟಕ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಬಿಹಾರಕ್ಕೆ ತೆರಳಿದ ಸಂದರ್ಭದಲ್ಲಿಯೇ ರಾಜ್ಯದ ಒಟ್ಟು 39 ನಿಗಮ, ಮಂಡಳಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ಪಟ್ಟಿಯನ್ನ AICC ಬಿಡುಗಡೆ ಮಾಡಿತ್ತು. ಆ ಪಟ್ಟಿಯಲ್ಲಿ ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರ ಹೆಸರು ಅರುಣ್ ಪಾಟೀಲ್ ಎಂದು ಇದ್ದಿದ್ದೇ ಈ ಗೊಂದಲಕ್ಕೆ ಕಾರಣವಾಗಿದೆ.