ಬೆಂಗಳೂರು,ಆ.21: ಗ್ಯಾರಂಟಿಗಳ ನೆಪದಲ್ಲಿ ಕಳೆದ ಎರಡು ವರ್ಷಗಳಿಂದ ಅಭಿವೃದ್ಧಿ ಚಟುವಟಿಕೆಗಳಿಗೆ ನಯಾಪೈಸೆ ಅನುದಾನ ನೀಡದ ಕಾಂಗ್ರೆಸ್ ಸರ್ಕಾರ ಕೇವಲ ಬೋಗಸ್ ಭರವಸೆ ನೀಡಿದೆ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಸದನದಲ್ಲಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಚಾಟಿ ಬೀಸಿದರು.
ಗುರುವಾರದ ಸದನದ ಅಧಿವೇಶನದಲ್ಲಿ ನಿಯಮ 69 ರಡಿಯಲ್ಲಿ ವಿಷಯ ಪ್ರಸ್ತಾಪಿಸಿದ ಸುನಿಲ್ ಕುಮಾರ್, ರಾಜ್ಯ ಸರ್ಕಾರದ ಅನುದಾನ ಬಿಡುಗಡೆ ಕೇವಲ ಭರವಸೆಯಾಗಿ ಉಳಿದಿದೆ. ಈ ಸರ್ಕಾರದ ಆಡಳಿತದಲ್ಲಿ ಅನುದಾನ ಇಲ್ಲದೇ ಶಾಸಕರು ತಲೆ ಎತ್ತದೆ ಓಡಾಡುವಂತೆ ಆಗಿದೆ. ಎರಡು ವರ್ಷದಲ್ಲಿ ಯಾವುದೇ ಅಭಿವೃದ್ಧಿ ಚಟುವಟಿಕೆ ಮಾಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ಅನುದಾನದ ಕುರಿತು
ಇತ್ತೀಚೆಗೆ ಬಿಡುಗಡೆಯಾದ Su ಫ್ರಮ್ So ಕಾಮಿಡಿ ಚಿತ್ರಕ್ಕೆ ಹೋಲಿಸಿ, ಇದು B(ಬೋಗಸ್) ಫ್ರಮ್ C (ಕಾಂಗ್ರೆಸ್) ಸರ್ಕಾರವಾಗಿದೆ.ಕಳೆದ ಎರಡು ವರ್ಷದಲ್ಲಿ ಸರ್ಕಾರ ಬೋಗಸ್ ಹೇಳಿದ್ದು ಬಿಟ್ಟರೆ ಬೇರೆ ಏನೂ ಮಾಡಿಲ್ಲ ಎಂದು ಟೀಕಿಸಿದರು.
ಈ ಸರ್ಕಾರದ ಅವಧಿಯಲ್ಲಿ ಯಾವುದೇ ಅಭಿವೃದ್ಧ ಕೆಲಸ ಆಗಿಲ್ಲ. ರಸ್ತೆಗೆ ಮಣ್ಣು ಹಾಕಲೂ ಈ ಸರ್ಕಾರ ಹಣ ಕೊಟ್ಟಿಲ್ಲ. ಒಂದೇ ಒಂದು ಕಿ.ಮೀ ಹೊಸ ರಸ್ತೆ ನಿರ್ಮಾಣ ಆಗಿಲ್ಲ. ಶಾಸಕರು ಓಡಾಡಲು ಆಗದ ಪರಿಸ್ಥಿತಿಯಿದೆ. ಈ ಮುಖ್ಯಮಂತ್ರಿ ಅಧಿಕಾರದಲ್ಲಿರುವಾಗಲೇ ಶಾಸಕರಿಗೆ ಅನುದಾನ ಕೊಡುತ್ತೀರೋ ಅಥವಾ ನವೆಂಬರ್ ಬಳಿಕ ಬದಲಾಗುವ ಮುಖ್ಯಮಂತ್ರಿಯಿಂದ ಅನುದಾನ ಕೊಡಿಸುತ್ತೀರೋ ಎಂದು ಪ್ರಶ್ನೆ ಮಾಡಿದರು.
ವಸತಿ ಯೋಜನೆಯಲ್ಲಿ ಕಳೆದ ಎರಡು ವರ್ಷದಲ್ಲಿ ಒಂದೇ ಒಂದು ಮನೆ ಕೊಟ್ಟಿಲ್ಲ. ಮಾತೆತ್ತಿದರೆ ಬಡವರ ಪರ ಎನ್ನುತ್ತಾರೆ. ಆದರೆ ಒಂದೂ ಮನೆ ಕೊಟ್ಟಿಲ್ಲ. ಹೀಗಾದರೆ ವಸತಿ ಇಲಾಖೆ ಇರುವುದು ಯಾಕೆ ಎಂದು ಪ್ರಶ್ನಿಸಿದ ಸುನಿಲ್ ಕುಮಾರ್, ನಿಗಮ ಮಂಡಳಿಗಳಿಗೆ ಸರ್ಕಾರ ಅನುದಾನ ನೀಡುತ್ತಿಲ್ಲ ಇದು ನಿಮ್ಮ ಜನಪರ ಕಾಳಜಿಯೇ ಎಂದು ಪ್ರಶ್ನಿಸಿದ್ದಾರೆ.