ಹೆಬ್ರಿ,ಅ.19: ಸಂಪೂರ್ಣ ಶಿಥಿಲವಾದ ಮಣ್ಣಿನ ಗೋಡೆ, ಮಳೆಗಾಲದಲ್ಲಿ ಸೋರುತ್ತಿದ್ದ ಮನೆಯ ಮೇಲ್ಚಾವಣಿ. ಶಿಥಿಲಾವಸ್ಥೆಯಲ್ಲಿದ್ದ ಮನೆ ಜೋರಾದ ಗಾಳಿ ಮಳೆಗೆ ಯಾವಾಗ ಕುಸಿದು ಬೀಳುತ್ತದೆಯೋ ಎನ್ನುವ ಆತಂಕ ಒಂದಡೆಯಾದರೆ,ಇನ್ನೊಂದೆಡೆ ಮನೆ ದುರಸ್ತಿಗೂ ಹಣವಿಲ್ಲದೇ ಪರದಾಟ. ಒಂದೆಡೆ ದೈನಂದಿನ ಜೀವನ ನಿರ್ವಹಣೆಯ ಭಾರ. ಇಂತಹ ದುಸ್ಥಿತಿಯಲ್ಲಿ ಜೀವನ ನಡೆಸುತ್ತಿ ದಲಿತ ಮಹಿಳೆಯ ಕುಟುಂಬದ ಬದುಕಿನಲ್ಲಿ ದೀಪಾವಳಿಯ ದಿನವೇ ಬೆಳಕು ಕಂಡ ಸಂಭ್ರಮ.
ದಲಿತ ಬಡ ಮಹಿಳೆಯ ನೋವಿಗೆ ಸ್ಪಂದಿಸಿದ ಕಾರ್ಕಳದ ಜನಸೇವಕ ಶಾಸಕ ಸುನಿಲ್ ಕುಮಾರ್ ದೀಪಾವಳಿಯ ದಿನದಂದೇ ಆ ಕುಟುಂಬದ ಪಾಲಿಗೆ ಬೆಳಕು ಮೂಡಿಸಿದ ನಿಜವಾದ ಜನ ನಾಯಕರಾಗಿದ್ದಾರೆ.
ಹರಕುಮುರುಕಲು ಮನೆಯಲ್ಲಿ ಬದುಕು ಸಾಗಿಸುತ್ತಿದ್ದ ಹೆಬ್ರಿಯ ದಲಿತ ಸಮುದಾಯದ ಚುಕ್ರಿ ಕೊರಗ ಎನ್ನುವ ಬಡ ಮಹಿಳೆಯ ಕುಟುಂಬಕ್ಕೆ ಸದೃಢವಾದ ಮನೆ ನಿರ್ಮಿಸಿಕೊಟ್ಟ
ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರು, ದೀಪಾವಳಿಯ ಆರಂಭದ ದಿನವಾದ ಭಾನುವಾರವೇ ಮನೆಯನ್ನು ಹಸ್ತಾಂತರಿಸಿ ಆ ಬಡ ಕುಟುಂಬ ಸದಸ್ಯರ ಮುಖದಲ್ಲಿ ದೀಪಾವಳಿಯ ಬೆಳಕು ಮೂಡಿಸಿದ್ದಾರೆ.
ಭಾನುವಾರ ನಡೆದ ಸರಳ ಕಾರ್ಯಕ್ರಮದಲ್ಲಿ ಶಾಸಕ ಸುನಿಲ್ ಕುಮಾರ್ ಅವರು ಚುಕ್ರಿ ಕೊರಗ ಕುಟುಂಬಕ್ಕೆ ನೂತನ ಮನೆಯ ಕೀ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಸ್ಥಳೀಯರಾದ ಸತೀಶ್ ಪೈ ,ಲಕ್ಸ್ಮಿನಾರಾಯಣ ನಾಯಕ್ ,ತಾರಾನಾಥ್ ಬಂಗೇರ
ಸುಧಾಕರ್ ಹೆಗ್ಡೆ ,ಅರುಣ್ ಶೆಟ್ಟಿ ಗಣೇಶ್ ಕುಮಾರ್, ಹೆಚ್ ಕೆ ಸುಧಾಕರ್ ,ಸುರೇಶ್ ಭಂಡಾರಿ,ಪ್ರಸಾದ್ ಭಂಡಾರಿ, ಶಶಿಧರ್ ಭೋಜ ಶೆಟ್ಟಿ ಹಾಗೂ ಚುಕ್ರಿ ಮತ್ತು ಅವರ ಕುಟುಂಬದ ಸದಸ್ಯರು ಉಪಸ್ಥಿತರಿದ್ದರು.
ತನ್ನ ಕ್ಷೇತ್ರದ ಅಭಿವೃದ್ಧಿ ಕೆಲಸಗಳ ಜೊತೆಜೊತೆಗೆ ಇಂತಹ ಮಾನವೀಯ ನೆರವನ್ನು ನೀಡುವ ಮೂಲಕ ಶಾಸಕ ಸುನಿಲ್ ಕುಮಾರ್ ಸೇವಾ ಕಾರ್ಯದಲ್ಲೂ ಮಾದರಿಯಾಗಿದ್ದಾರೆ.