ಕಾರ್ಕಳ:ಪರಶುರಾಮ ಥೀಂ ಪಾರ್ಕ್ ಹಾಗೂ ಪ್ರತಿಮೆಯ ಬಗ್ಗೆ ಕಾಂಗ್ರೆಸಿಗರು ನಡೆಸುತ್ತಿದ್ದ ನಿರಂತರ ಅವಮಾನಕ್ಕೆ ಸೋಲಾಗಿದೆ.
ಪರಶುರಾಮನ ಪ್ರತಿಮೆ ಫೈಬರ್’ನದ್ದು ಎಂದು ನಡೆಸುತ್ತಿದ್ದ ಟೂಲ್ ಕಿಟ್ ಮೂಲಕ ಸುಳ್ಳು, ಅಪಪ್ರಚಾರ ಮಾಡುತ್ತಿದ್ದ ಕಾಂಗ್ರೆಸ್ ಪಕ್ಷದವರ ಬಣ್ಣ ಪೊಲೀಸ್ ತನಿಖೆಯಿಂದಲೇ ಸಾಬೀತಾಗಿದೆ ಎಂದು ಕಾರ್ಕಳ ಶಾಸಕ ಸುನಿಲ್ ಕುಮಾರ್ ಹೇಳಿದ್ದಾರೆ.
ಪ್ರತಿಮೆಯನ್ನು ಹಿತ್ತಾಳೆಯಿಂದ ನಿರ್ಮಿಸಲಾಗಿದೆ ಎಂದು ಕಾರ್ಕಳ ಪೊಲೀಸರು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪ ಪಟ್ಟಿಯಲ್ಲಿ ಉಲ್ಲೇಖಿಸಿದ್ದಾರೆ. ಜತೆಗೆ ಪರಶುರಾಮನ ಪ್ರತಿಮೆಯ ಸೊಂಟದ ಮೇಲ್ಭಾಗವನ್ನು ಮರು ವಿನ್ಯಾಸ ಉದ್ದೇಶದಿಂದ ತೆಗೆದಿದ್ದು ಎಂಬುದನ್ನೂ ನ್ಯಾಯಲಯಕ್ಕೆ ಸ್ಪಷ್ಟಪಡಿಸಿದ್ದಾರೆ. ಇದರಿಂದ ಪ್ರತಿಮೆ ಫೈಬರ್’ನದ್ದು ಎನ್ನುವ ವ್ಯವಸ್ಥಿತ ಪಿತೂರಿಗೆ ಹಿನ್ನಡೆಯಾಗಿದೆ.
ಇನ್ನಾದರೂ ರಾಜ್ಯ ಸರ್ಕಾರ ಪರಶುರಾಮ ಥೀಂ ಪಾರ್ಕ್ ಗೆ ನಿಗದಿ ಮಾಡಿದ್ದ ಅನುದಾನವನ್ನು ಬಿಡುಗಡೆ ಮಾಡುವ ಜತೆಗೆ ಈ ತಾಣವನ್ನು ಪ್ರವಾಸೋದ್ಯಮಕ್ಕೆ ಮತ್ತೆ ತೆರೆಯಬೇಕು. ಅಭಿವೃದ್ಧಿ ವಿಚಾರದಲ್ಲಿ ನಡೆಸುವ ದ್ವೇಷದ ರಾಜಕಾರಣಕ್ಕೆ ತೆರೆ ಬೀಳಬೇಕೆಂದು ಶಾಸಕ ಸುನಿಲ್ ಕುಮಾರ್ ಆಗ್ರಹಿಸಿದ್ದಾರೆ.